ಮರೆತುಹೋದ ಕವಿತೆಗಳು. . .

ಯಾವತ್ತೋ ನಾ ಗೀಚಿದ ಕವಿತೆಗಳು ಇವು. ಇವು ಕವಿತೆಗಳೇ? ಬಹುಷಃ ಅಲ್ಲವೇನೋ. ನಾನು ಬರೆಯಬೇಕೆಂದು ಬರೆದ ಕವಿತೆಗಳಲ್ಲ ಇವು. ಒಂದು ಆಲೋಚನೆ, ಒಂದು ಭಾವನೆ, ಇನ್ಯಾವುದೋ ಕನಸು, ಮತ್ತ್ಯಾವುದೋ ನೆನಪು ಬೇರೆ ಬೇರೆ ಕಾಲದಲ್ಲಿ ಹನಿಗಟ್ಟಿದ್ದು. ಒಮ್ಮೆ ಓದಿ ಮರೆತು ಬಿಡಿ. ಅಷ್ಟಕ್ಕೂ ಇವು ಮರೆತು ಹೋದ ಕವಿತೆಗಳು. . .

(೧)

ಎದೆಯೊಳಗೆ ಎಂದೋ ಹುಟ್ಟಿದ್ದ ಕನಸೊಂದು
ಇನ್ನೂ ಜೀವಂತವಾಗಿ ಮಲಗಿದೆ ಶವದ ಪೆಟ್ಟಿಗೆಯೊಳಗೆ.

(೨)

ಇನ್ನೆಲ್ಲ್ಲಿಯ ಹಗೆತನ ಗೆಳತಿ?
ನಾನೂ ಮಣ್ಣಾದೆ, ನೀನೂ ಮಣ್ಣಾದೆ.
ಇದೇ ಮಣ್ಣಲ್ಲಿ ಹೂತು ಹೋದರು ನಮ್ಮ ಸುತ್ತಮುತ್ತಲಿನ ಜನಗಳು.
ಕಾಲದಲ್ಲಿ ಕರಗಿಹೋದರು ನಮ್ಮ ಕತೆಯ ಪಾತ್ರಧಾರಿಗಳು.
ಇನ್ಯಾವುದೇ ತುಮುಲಗಳಿಲ್ಲ,
ದ್ವೇಷ-ಕಲ್ಮಷಗಳಿಲ್ಲ.
ಶಾಂತಿ ಬರಿಯ ಶಾಂತಿ.

(೩)

ಮತ್ತೊಂದು ಕವಿತೆ ಹುಟ್ಟುತ್ತಲೇ ಸತ್ತು ಹೋಯಿತು.
ನನ್ನ ನಿಟ್ಟುಸಿರಲ್ಲಿ ಕೊನೆಗಂಡಿತು,
ಅವಳ ಕಣ್ಣೀರಲ್ಲಿ ಕರಗಿಹೋಯಿತು,
ತಾನೆಂದೂ ಹುಟ್ಟಿರಲಿಲ್ಲವೋ ಎಂಬಂತೆ.

(೪)

ಮತ್ತೊಮ್ಮ ಹುಟ್ಟಿದ ಸೂರ್ಯ,
ಮತ್ತೊಮ್ಮೆ ಹುಟ್ಟಿದೆ ನಾನು,
ಹೊಸದೊಂದು ಮುಖವಾಡ ಧರಿಸಿ

(೫)

ಅಕ್ಷರಗಳು ಬರಿದಾಗಿ ಕೈ ಸೋತಾಗ
ಬರೆಯಲೇಬೇಕೆಂಬ ತೊಳಲಾಟ ಏಕೆ?
ಬರೆಯುವಾತ ಮಾತ್ರ ಕವಿಯೆಂಬ ಭ್ರಮೆಯೇ?
ನಾ ಬರೆಯದಿರುವ ನೋವುಗಳು ಯಾವ ಕವಿತೆಗಳಿಗಿಂತ ಕಮ್ಮಿ?

ಕವಿತೆಯಾಗಿ ಹರಿಯದ ನೋವು ಅದೆಂತಹದ್ದು ಅಂದಾರು ಜನ.
ಅವರಿಗೇನು ಗೊತ್ತು?
ನಾ ಬರೆಯಲಾಗದ ನೋವುಗಳ ಮುಂದೆ
ಈ ಕವಿತೆಗಳು ಸಪ್ಪೆ ಅಕ್ಷರಗಳು ಮಾತ್ರ.

ಸದ್ಯಕ್ಕೆ ಇಷ್ಟು ಸಾಕು. . .