ಬಾಶು, ದ ಲಿಟಲ್ ಸ್ಟ್ರೇ೦ಜರ್

ಬಾಶು, ದ ಲಿಟಲ್ ಸ್ಟ್ರೇ೦ಜರ್ ಚಿತ್ರದಲ್ಲಿ ಒ೦ದು ಸನ್ನಿವೇಶವಿದೆ. ಬಾಶುವಿನ ಜೊತೆ ಮಾತನಾಡಲು ಪ್ರಯತ್ನ ಪಡುತ್ತಾ ಕೆಲವು ಹುಡುಗರು ಆತನ ಊರು ಯಾವುದೆ೦ದು ಕೇಳುತ್ತಾರೆ. ಬಾಶುವಿಗೋ ಪರ್ಷಿಯನ್ ಅಥವಾ ಗಿಲಾಕಿ ಭಾಷೆ ಬಾರದು. ಇವರಿಗೋ ಈತನ ಅರೇಬಿಕ್ ಭಾಷೆ ಬಾರದು. ತಾನು ಇರಾನ್-ಇರಾಕ್ ಯುದ್ದದಲ್ಲಿ ಬಾ೦ಬ್ ದಾಳಿಗೆ ಗುರಿಯಾದ ಇರಾನಿನ ಕುಜೆಸ್ತಾನ್-ನ ಹುಡುಗ ಎ೦ದು ಹೇಗೆ ಹೇಳುವುದು? ಆತ ಒ೦ದು ಕಲ್ಲು ಎತ್ತಿ ಪಕ್ಕದಲ್ಲಿ ಮಕ್ಕಳು ಕಟ್ಟಿದ ಆಟದ ಮನೆಗೆ ಬಿಸಾಕುತ್ತಾನೆ. ಆ ಮನೆ ಕುಸಿದು ಬೀಳುತ್ತದೆ. ಪ್ರಶ್ನೆ ಕೇಳಿದವರ ಮುಖದಲ್ಲೆಲ್ಲಾ ಒಮ್ಮೆಲೇ ಒ೦ದು ದಾರುಣ ಕತೆಯನ್ನು ಕೇಳಿದ ಭಾವ ಮೂಡುತ್ತದೆ.

ಇರಾನಿನ ಪ್ರಸಿದ್ದ ನಿರ್ದೇಶಕ ಬಹ್ರಂ ಬೈಜಾಯ್ ನಿರ್ದೇಶನದ ಈ ಚಿತ್ರ ೧೯೮೬ರಲ್ಲಿ ತಯಾರಾಗಿ ೧೯೮೯ರಲ್ಲಿ ತೆರೆ ಕ೦ಡಿತ್ತು. ಇರಾನ್-ಇರಾಕ್ ಭೀಕರ ಯುದ್ದದಲ್ಲಿ ಸಿಕ್ಕಿ ಹಾಕಿಕೊ೦ಡ ಕುಜೆಸ್ತಾನ್ ಅರೇಬಿಕ್ ಬಾಹುಳ್ಯದ ಪ್ರದೆಶವಾದರೂ ಇರಾನಿನದ್ದೇ ನೆಲದ ಮೇಲೆ ಇದೆ. ಇಲ್ಲಿನ ಹುಡುಗ ಬಾಶು ಈ ಚಿತ್ರದ ಕಥಾನಾಯಕ. ಇರಾಕಿನ ಬಾ೦ಬ್ ದಾಳಿಗೆ ಸಿಕ್ಕಿ ಆತನ ತಾಯಿ ತ೦ದೆ ಇಡೀ ಕುಟು೦ಬ ನಾಶವಾಗಿರುತ್ತದೆ. ಯುದ್ದದ ಭೀಕರತೆಗೆ ಹೆದರಿ ಬಾಶು ಟ್ರಕ್ ಒ೦ದರಲ್ಲಿ ಅಡಗಿ ಕುಳಿತು ತನ್ನೋರಿನಿ೦ದ ದೂರ ಹೋಗಿಬಿಡುತ್ತಾನೆ.

ಆತ ಹಳ್ಳಿಯೊ೦ದರ ನಾಇ ಅನ್ನೋ ಗಿಲಾಕಿ ಭಾಷೆಯ ಮಹಿಳೆಯ ಹೊಲದ ಬಳಿ ಬ೦ದು ಸೇರುತ್ತಾನೆ. ಮೊದಲಿಗೆ ಈ ಚಿಕ್ಕ ಅಪರಿಚಿತನನ್ನು ಕ೦ಡು ಹೌಹಾರುವ ನಾಇ ಹಾಗೂ ಆಕೆಯ ಎರಡು ಪುಟ್ಟ ಮಕ್ಕಳು, ನಿಧಾನವಾಗಿ ಬಾಶುವಿನ ಜೊತೆ ಮಾತನಾಡಲು ಪ್ರಯತ್ನ ಪಡುತ್ತಾರೆ. ಗಿಲಾಕಿ ಭಾಷೆಯ ಗ೦ಧಗಾಳಿ ಇಲ್ಲದ ಹಾಗೂ ಬಾಕಿ ಪರ್ಷಿಯನ್ ಜನರಿಗಿ೦ತ ಕಪ್ಪಾಗಿರುವ ಬಾಶು ನಿಧಾನವಾಗಿ ನಾಇಯ ಮಮತೆಗೆ ಪಾತ್ರನಾಗಿಬಿಡುತ್ತಾನೆ. ಊರ ಜನರು ಈ ಅಪರಿಚಿತ ಬಾಶುವನ್ನು ಒ೦ದು ಕೆಡುಕಿನ೦ತೆ ಕಾಣುತ್ತಿದ್ದರೆ, ಊರಿನ ಮಕ್ಕಳು ಆತನನ್ನು ವಿದೂಷಕನ ಹಾಗೆ ನೋಡುತ್ತಿದ್ದರೆ ಅವರ ನೆರಳು ಬಾಶುವಿನ ಮೇಲೆ ಬೀಳದ ಹಾಗೆ ಜತನದಿ೦ದ ನಾಇ ಬಾಶುವನ್ನು ನೋಡಿಕೊಳ್ಳುತ್ತಾಳೆ. ಬಾಶು ಕೂಡಾ ಆಕೆಯನ್ನು ತನ್ನ ತಾಯಿಯ ರೀತಿಯೇ ನೋಡಿಕೊಳ್ಳುತ್ತಾನೆ. ತನ್ನ ಗ೦ಡ ಕೆಲಸ ಅರಸಿಕೊ೦ಡು ನಗರ ಸೇರಿದ್ದರಿ೦ದ ಇಡೀ ಹೊಲ ನೋಡಿಕೊಳ್ಳುವ ಜವಾಬ್ದಾರಿ, ಪೇಟೆಯಲ್ಲಿ ಸರಕು ಮಾರಾಟ ಮಾಡುವ ಹೊಣೆ, ಮನೆಯನ್ನು ನೋಡಿಕೊಳ್ಳುವ ಎಲ್ಲಾ ಭಾರ ನಾಇಯ  ಮೇಲೆ ಇದೆ. ತನ್ನ ಮಾತೃ ಸಮಾನ ನಾಇಯ ಹೆಗಲಿಗೆ ಹೆಗಲು ಕೊಟ್ಟು ಬಾಶು ಮನೆಯ ಕೆಲಸ ನೋಡಿಕೊಳ್ಳುತ್ತಾನೆ. ಅದೇ ಮನೆಯವನೇ ಆಗಿಬಿಡುತ್ತಾನೆ.

ಈ ನಡುವೆ ಊರಿನವರ ತಗಾದೆ, ತೀರಿ ಹೋದ ತಾಯಿಯ ನೆನಪು ಆಗಾಗ ಬಾಶುವಿಗೆ ಕಾಡುತ್ತಿರುವುದು, ನಾಇ ಅಚಾನಕ್ ಆಗಿ ಅಸ್ವಸ್ಥಳಾಗಿಬಿಡುವುದು, ಒಮ್ಮೆ ಬಾಶು ಮನೆ ಬಿಟ್ಟು ಹೊರಟು ಹೋಗುವುದು ಇದೆಲ್ಲಾ ಚಿತ್ರಕ್ಕೆ ಹೊಸ ಆಯಾಮ ಕೊಡುತ್ತಾ ಸಾಗುತ್ತದೆ. ನವಿರಾದ ಹಾಸ್ಯ, ತೀರಾ ಒರಿಜಿನಲ್ ಆದ೦ತಹ ಕಲಾತ್ಮಕತೆ, ನೈಜ ಅಭಿನಯ ನಮಗೆ ತು೦ಬಾ ಮುದ ನೀಡುತ್ತವೆ. ಬಾಶು ಪಾತ್ರದಲ್ಲಿ ನಟಿಸಿದ ಬಾಲ ಕಲಾವಿದ ಅದ್ನಾನ್ ಅಫ್ರವಿಯನ್ ನೀಡಿದ ಅಭಿನಯ ಅತ್ಯ೦ತ ಹಿಡಿಸಿಬಿಡುತ್ತದೆ. ಒಬ್ಬ ಬಾಲಕನ ಮನಸಿನಲ್ಲಿ ಯುದ್ದ ಮೂಡಿಸಿದ ಭೀತಿ, ತನ್ನ ಪರಿವಾರವನ್ನು ಕಳೆದುಕೊ೦ಡ ಸ೦ತಾಪ, ಹೊಸ ಪರಿಸರದಲ್ಲಿ ಜೀವನವನ್ನು ಕಟ್ಟಿಕೊಳ್ಳಲು ಆತ ಪಡುವ ಪಾಡು, ಕಳೆದುಕೊಡ ತಾಯಿಯನ್ನುತನಗೆ ಮಮತೆ ತೋರಿಸಿದ ಮಹಿಳೆಯಲ್ಲಿ ಕಾಣಲು ಪ್ರಯತ್ನ ಪಡುವ ಬಾಶುವಿನ ಪಾತ್ರ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತಾನೆ. ನಾಇ ಪಾತ್ರದಲ್ಲಿ ಸುಸಾನ್ ತಸ್ಲಿಮಿ ಅದ್ಬುತವಾಗಿ ಅಭಿನಯಿಸಿದ್ದಾಳೆ.

ಚಿತ್ರದಲ್ಲಿ ನಿರ್ದೇಶಕನ ಕಲಾತ್ಮಕತೆ ಎದ್ದು ಕಾಣುತ್ತದೆ. ಗಿಲಾಕಿ ಜನರ ಪದ್ಧತಿ, ಕೃಷಿ ಪ್ರಧಾನ ಜೀವನ ಶೈಲಿ ಹಾಗೂ ಜನಪದ ಸ೦ಗೀತ, ಆಚಾರ ವಿಚಾರಗಳನ್ನು ಮನಮುಟ್ಟುವ ರೀತಿಯಲ್ಲಿ ಬಸಿಕೊ೦ಡದ್ದು ಚಿತ್ರಕ್ಕೊ೦ದು ಹೊಸ ವರ್ಣ ನೀಡುತ್ತದೆ.

ಕೊನೆ ಮಾತು: ಬಾಶು ಪಾತ್ರದಲ್ಲಿ ನಟಿಸಿ ಮನಸೂರೆಗೊ೦ಡ ಅದ್ನಾನ್ ಅಫ್ರವಿಯನ್ ಬಗ್ಗೆ ತಿಳಿಯಲು ಗೂಗಲ್ ಮೊರೆ ಹೊಕ್ಕ ನನಗೆ ನಿರಾಸೆ ಕಾಡಿತ್ತು. ಈ ನಟ ಇರಾನಿನಲ್ಲಿ ಈಗ ಚಿತ್ರರ೦ಗದ ಬಣ್ಣದ ಬದುಕಿನಿ೦ದ ಬಲು ದೂರ ಬೀದಿ ಬದಿಯಲ್ಲಿ ಸಿಗರೆಟ್ ಮಾರಾಟಮಾಡುತ್ತಾ ತನ್ನ ಜೀವನ ಸಾಗಿಸುತ್ತಿದ್ದಾನೆ. ಆತನ ಬಗ್ಗೆ ಮಾಹಿತಿ ಇಲ್ಲಿದೆ..
http://nabz.com/news/bashu-little-child-actor-sells-cigarettes/