ಇಲ್ಲೇ ಇದೇ ಕೋಣೆಯ ಮಂಚದ ಮೇಲೆ
ನನ್ನ ಕಣ್ಣೀರಿಂದ ತೋಯ್ದ ದಿಂಬಿನಲ್ಲಿ
ತಲೆಯಿಟ್ಟು ಮಲಗಿದ್ದಳು ಆಕೆ,
ಕೆಲ ದಿನಗಳ ಹಿಂದೆ.
ಇಂದು ಇಲ್ಲೆಲ್ಲೂ ಕಾಣಿಸುತ್ತಿಲ್ಲ.
ಆಕೆಯ ಸಾಂತ್ವನದ ನುಡಿಗಳಿಲ್ಲ,
ಗೆಜ್ಜೆಯ ಸದ್ದೂ ಇಲ್ಲ.
ಕೋಣೆಯೊಳಗೆ ನೀರವತೆಯ ತುಂಬಿ
ನನ್ನಿಂದ ದೂರವಾಗಿದ್ದಾಳೆ
ನನ್ನ ಜೀವದ ಗೆಳತಿ.
ನನ್ನ ಮೇಲೆ ಮುನಿಸಿಕೊಂಡಿರಬೇಕು,
ಬಹಳ ನೊಂದಿರಬೇಕು ಅವಳು.
ಜನ್ಮ ಜನ್ಮಾಂತರದ ನಂಟು ನಮ್ಮದು,
ಒಂದು ಆತ್ಮವ ಇಬ್ಬರು ಹಂಚಿಕೊಂಡಂತೆ.
ಯಾವತ್ತೂ ಬಿಟ್ಟುಹೋದವಳಲ್ಲ,
ಯಾಕೆ ಮಾಡಿದಳು ಹೀಗೆ ಇಂದು?
ನನಗೆ ಇಂದಿಗೂ ನೆನಪಿದೆ
ಚಂದ್ರ ತೀರಿದ ಗ್ರಹಣದ ರಾತ್ರಿ.
ಹೊಸ್ತಿಲಲ್ಲಿ ಕುಳಿತು ಬಹಳ ಅತ್ತಿದ್ದೆ
ಆ ಖೂಳ ಇರುಳಿಗೆ ಹೆದರಿ.
ಬಿಗಿದಪ್ಪಿ ಧೈರ್ಯ ತುಂಬದೇ ಹೋಗಿದ್ದಲ್ಲಿ ಅವಳು,
ಹುಟ್ಟಿ ಬರುತ್ತಿದ್ದನೇ ಮರುದಿನ ಸೂರ್ಯ?
ಕತ್ತಲ ರಕ್ಕಸರು ಕನಸಲ್ಲಿ ಕಾಡಿ ನಾ ಎಚ್ಚೆತ್ತಾಗ
ಅವಳ ಕೈಬೆರಳು ಹಿಡಿದು ಮತ್ತೆ ನಿದ್ದೆಗೆ ಜಾರಿದ್ದೆ.
ನನ್ನ ಕವನಗಳಿಗೆ ನಾನೇ ಬೆಂಕಿಯಿಟ್ಟು ಅಳುತ್ತಿದ್ದಂದು
ಹೆಗಲ ಮೇಲೆ ಕೈಹಾಕಿ, ಹಣೆಗೆ ಮುತ್ತನಿಟ್ಟು,
ಪ್ರೀತಿಯ ಮಾತನಾಡಿದ್ದಳು ನನ್ನ ಗೆಳತಿ.
ಮೊಗಸಾಲೆಗೆ ನನ್ನ ಕಾಣಲು ಗೆಳೆಯರು ಬಂದಾಗ
ಕೋಣೆಯಿಂದ ಮಾಯವಾಗಿ ಬಿಡುತ್ತಿದ್ದಳು ಆಕೆ
ಅವರು ಯಾರೂ ಆಕೆಯ ಕಂಡಿದ್ದಿಲ್ಲ,
ನಾನೂ ಆಕೆಯ ಬಗ್ಗೆ ಅವರಲ್ಲಿ ಮಾತಾಡಿದ್ದಿಲ್ಲ.
ನನ್ನ ಕೋಣೆಯ ತುಂಬಾ ಆವರಿಸಿದ್ದ ಆಕೆಯ
ಹೆಜ್ಜೆ ಗುರುತುಗಳನ್ನು ಅವರು ನೋಡಿರಬಹುದೇ?
ನನ್ನ ಕಚೇರಿ ಕೆಲಸ ಕಡತಗಳಲ್ಲಿ ನಾ ಮುಳುಗಿ ಹೋದಾಗ,
ಬಜಾರು ಹಾದಿ ಬಸ್ಸಿನಲ್ಲಿ ಕಳೆದು ಹೋದಾಗ,
ಕೋಣೆಯಲ್ಲಿ ನನ್ನ ಮಂಚದ ಬದಿಯಲ್ಲಿ ಕುಳಿತು
ನನ್ನ ಬರವಿಗೆ ಕಾಯುತ್ತಿದ್ದ ಆಕೆ ಸದಾ ಕಾಡುತ್ತಿದ್ದಳು.
ಜನಜಂಗುಳಿಯ ನಡುವೆ ಕರಗಿ ಹೋದಾಗ
ಕಾಫಿ ಮಾತು ಊಟದ ಜೊತೆ ದಿನ ಕಂತಿದಾಗ
ಆಕೆಯ ಇರುವಿಕೆಯ ಅನುಭೂತಿ
ಮನದ ತುಂಬೆಲ್ಲಾ ಮನೆಮಾಡುತ್ತಿತ್ತು.
ಹೊಸ ಜನಗಳು ಬಂದಾಗ, ಹೊಸ ಪಯಣ ಹೊರಟಾಗ
ಅವಳಿಂದ ದೂರವಾಗಿದ್ದೆ ನಿಜ; ಅರೆ ಮನಸಿನಿಂದ ಬಹುಷ.
ಬಂದ ಜನ ಮರೆಯಾದಾಗ ಮತ್ತೆ ಬರುತ್ತಿದ್ದೆ.
ಇಲ್ಲ! ಆಕೆಯೇ ಬರುತಿದ್ದಳು ನನ್ನ ಬಳಿ; ತಪ್ಪದೇ.
ಮರೆತು ಸಾಗಿದ ಜನಗಳ, ಮುರಿದು ಹೋದ ಕನಸುಗಳ,
ನಿರ್ವಾತ ಕ್ಷಣಗಳ ಬದಲಿಗೋ ಎಂಬಂತೆ.
ಕೋಣೆಯೊಳಗಿಂದ ಎಲ್ಲಿ ಹೋದಳವಳು?
ಪರದೆಗಳ ನಡುವೆ ಬಂಧಿಯಾದ
ಕತ್ತಲೊಳಗೆ ಕರಗಿ ಹೋದಳೇ?
ಶಿಥಿಲಗೊಂಡ ಮರದ ಕಪಾಟಿನ
ಹಿಂದೆ ಅಡಗಿ ಕುಳಿತಳೇ?
ನಡೆಯದ ಗೋಡೆಗಡಿಯಾರದ
ನಿಂತ ನಿಮಿಷದೊಳಗೆ ಲೀನವಾದಳೇ?
ಕೆನ್ನೆ ಮೇಲೆ ಜಾರಿದ ಕಂಬನಿ ಒರೆಸಿ
ಪೇಟೆಯಲ್ಲಿ ನಡೆದು ಹೋಗುತಿದ್ದಂದು
ನಮ್ಮ ಬಗ್ಗೆ ಒಬ್ಬ ದಾರಿಹೋಕ ಮಾತನಾಡುತಿದ್ದ.
ಅದೋ ನೋಡು ಕವಿ ಹೋಗ್ತಾ ಇದ್ದಾನೆ.
ಆತನ ಜೀವದ ಗೆಳತಿ ಬಗ್ಗೆ
ಗೊತ್ತಾ ನಿಮಗೆ?
ಆಕೆಯ ಹೆಸರು ‘ಏಕಾಂಗಿತನ’ ಅಲ್ಲವೇ?