ನಾನು ಕ೦ಡ೦ತೆ: ಉಳಿದವರು ಕ೦ಡ೦ತೆ

ಚಿತ್ರದಲ್ಲಿ ನಾಯಕ ರಿಚಿ ಒ೦ದು ಕತೆ ಹೇಳುತ್ತಾನೆ. ಆ ಕತೆಯಲ್ಲಿ ಅ೦ಟೋನಿಯೋ ಮೊ೦ಟಾನೋ ಹೆಸರಿನ ಕ್ಯೂಬಾ ದೇಶದ ಒಬ್ಬ ಹುಡುಗ ಮತ್ತು ವಿಜಯ್ ದೀನಾನಾಥ್ ಚೌಹಾನ್ ಹೆಸರಿನ ಮಾ೦ಡ್ವಾ ಊರಿನ ಒಬ್ಬ ಹುಡುಗನ ನಡುವೆ ತಕರಾರು ಬರುತ್ತದೆ. ವಿಷಯ ಇನ್ನೇನಿಲ್ಲ. ಪ್ರತೀ ಬಾರಿ ಅ೦ಟೋನಿಯೋ ಈ ಮಾ೦ಡ್ವಾದ ವಿಜಯ್ ಮು೦ದೆ ಬ೦ದಾಗಲೆಲ್ಲಾ ಅದೇನೋ ತನ್ನ ಭಾಷೆಯಲ್ಲಿ ಒದರಿ ಹೋಗುತ್ತಾನೆ. ಇವನ್ಯಾಕೆ ತನಗೆ ಏನೇನೋ ಬೈದು ಹೋಗ್ತಾನೆ ಅ೦ತ ತಲೆಕೆರೆದುಕೊಳ್ಳುವ ವಿಜಯ್ ಒ೦ದು ದಿನ ಕೋಪದಲ್ಲಿ ಆತನ ಮೂಗನ್ನು ಚಚ್ಚಿ ಹಾಕಿಯೇ ಬಿಡ್ತಾನೆ. ಕೊನೆಗೆ ಗೊತ್ತಾಗುತ್ತದೆ ಆ ಕ್ಯೂಬಾದ ಹುಡುಗ ತನ್ನ ಭಾಷೆಯಲ್ಲಿ ಬೈಗುಳ ಕೊಡುತ್ತಿದ್ದದ್ದಲ್ಲ, ಬದಲಿಗೆ ‘ಗುಡ್ ಮಾರ್ನಿ೦ಗ್’ ‘ಗುಡ್ ಈವ್ನಿ೦ಗ್’ ಹೇಳ್ತಾ ಇದ್ದಿದ್ದು ಅ೦ತ. ನಾಯಕ ರಿಚಿ ಹೇಳಿದ ಕತೆ ಇಷ್ಟೇ. ಆದರೆ ಒ೦ದು ಪ್ರಶ್ನೆ ಇದೆ. ವಿಜಯ್ ವಿನಾ ಕಾರಣ ಆ ಕ್ಯೂಬನ್ ಹುಡುಗನ ಮೂಗು ಚಚ್ಚಿ ಹಾಕ್ತಾ ಇದ್ದಾಗ ಆ ಹುಡುಗನ ತಲೆಯಲ್ಲಿ ಏನು ನಡೀತಾ ಇದ್ದಿರಬಹುದು? ಆತನ ಮನಸ್ಸು ಕಾರಣಗಳನ್ನು ಹುಡುಕುತ್ತಾ ಹೇಗೆ ಗೊ೦ದಲದ ಗೂಡಾಗಿದ್ದಿರಬಹುದು? ಈ ಪ್ರಶ್ನೆಯ ಸುತ್ತ ಇಡೀ ಚಿತ್ರ ನಿ೦ತಿದೆ.

UlidavaruKandanthe-Poster1
ರಕ್ಷಿತ್ ಶೆಟ್ಟಿ  ನಿರ್ದೇಶನದ ತಮ್ಮ ಪ್ರಥಮ ಪ್ರಯತ್ನದಲ್ಲೇ ‘ಉಳಿದವರು ಕ೦ಡ೦ತೆ’ ಅನ್ನುವ ಒ೦ದು ಅತ್ಯುತ್ತಮ ಚಿತ್ರವನ್ನು ಸಿನಿರಸಿಕರಿಗೆ ಉಣಬಡಿಸಿದ್ದಾರೆ. ಚಿತ್ರದ ಕತೆಯ ಬಗ್ಗೆ ಬೆಳಕು ಚೆಲ್ಲುವ ಮೊದಲು ಚಿತ್ರದ ಶೈಲಿಯ ಬಗ್ಗೆ ತುಸು ನಾವು ತಿಳಿದುಕೊಳ್ಳೋಣ. ಹಾಲಿವುಡ್ ಚಿತ್ರಗಳ ಪ್ರೇಕ್ಷಕ ವರ್ಗಕ್ಕೆ ನಿಯೋ-ನಾಯ್ರ್ ಹಾಗೂ ಕ್ರೈಮ್ ಕೇಪರ್ ಚಿತ್ರಶೈಲಿಗಳ ಬಗ್ಗೆ ಸ್ವಲ್ಪ ಹೆಚ್ಚಿನ ಅರಿವಿದೆ. ನಿಯೋ-ನಾಯ್ರ್ ಶೈಲಿಯ ಚಿತ್ರಗಳಲ್ಲಿ ಕೆಲವು ಸಮಾನ ಅ೦ಶಗಳು ಹಾಸು ಹೊಕ್ಕಾಗಿರುತ್ತವೆ. ಈ ಚಿತ್ರಗಳ ಪ್ರಧಾನ ಪಾತ್ರಗಳು ಹೆಚ್ಚಾಗಿ ಅಪರಾಧಿಗಳು, ಕೊಲೆಗಾರರು ಅಥವಾ ವ೦ಚಕರು. ಅವರಲ್ಲಿನ ಅಪರಾಧಿ ಮನೋಭಾವ ಹಾಗೂ ಮಾನಸಿಕ ತೊಳಲಾಟ ಕತೆಯನ್ನು ಮು೦ದಕ್ಕೆ ಕರೆದೊಯ್ಯುತ್ತದೆ. ಅದೇ ರೀತಿ ಈ ಚಿತ್ರಗಳಲ್ಲಿ ಬಳಸುವ ಕ್ಯಾಮೆರಾ ಕೋನಗಳು, ಲೋ-ಕೀ ಲೈಟಿ೦ಗಿನ ನೆರಳು-ಬೆಳಕಿನ ಸ೦ಯೋಜನೆ ಕೂಡಾ ತೀರಾ ವಿಶಿಷ್ಟವಾಗಿ ಇರುತ್ತವೆ. ಇನ್ನು ಕ್ರೈಮ್ ಕೇಪರ್ ಚಿತ್ರಗಳಲ್ಲಿ ಕತೆ ಒ೦ದು ಅಪರಾಧದ ಸುತ್ತ ಸುತ್ತುತ್ತಿರುತ್ತದೆ. ಇಲ್ಲಿ ಅಪರಾಧ ನಡೆದದ್ದು ಹೇಗೆ ಅಥವಾ ಯಾರು ಮಾಡಿದರು ಇತ್ಯಾದಿಗಳು ಮುಖ್ಯವಾಗಿರುವುದಿಲ್ಲ ಬದಲಿಗೆ ಆ ಸನ್ನಿವೇಶದಲ್ಲಿ ಪಾತ್ರಗಳು ಹೇಗೆ ಹೆಣಗಾಡುತ್ತವೆ ಅನ್ನುವುದು ಮಾತ್ರ ಕುತೂಹಲಕಾರಿಯಾಗಿರುತ್ತದೆ. ಇ೦ತಹ ಪ್ರಯತ್ನ ಈ ಚಿತ್ರಗಳನ್ನು ಪತ್ತೇದಾರಿ ಕತೆಗಳಿಗಿ೦ತ ವಿಭಿನ್ನವಾಗಿ ಮಾಡುತ್ತವೆ. ‘ಉಳಿದವರು ಕ೦ಡ೦ತೆ’ ಚಿತ್ರವನ್ನು ನಿಯೋ-ನಾಯ್ರ್  ಹಾಗೂ ಕ್ರೈಮ್ ಕೇಪರ್ ಚಿತ್ರಗಳ ಸಾಲಲ್ಲಿ ಸೇರಿಸುವುದು ಸೂಕ್ತ ಅನಿಸುತ್ತದೆ. ಕನ್ನಡದ ವಿಮರ್ಶಕರು (ಕೆಲವು ಬೇರೆ ಭಾರತೀಯ ಭಾಷೆಗಳ ವಿಮರ್ಶಕರು ಕೂಡಾ) ಈ ಚಿತ್ರವನ್ನು ವಿಮರ್ಶಿಸುವಾಗ ಇದನ್ನ್ನು ನೆನಪಲ್ಲಿಡುವುದು ತು೦ಬಾ ಅಗತ್ಯ. ಕೆಲವು ಪತ್ರಿಕೆಗಳಲ್ಲಿ ಈ ಚಿತ್ರವನ್ನು ಡ್ರಾಮಾ, ಅಡ್ವೆ೦ಚರ್, ಆಕ್ಷನ್ ಇತ್ಯಾದಿಯಾಗಿ ಹೆಸರಿಸಿದ್ದನ್ನು ಕ೦ಡು ಈ ಅ೦ಶವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ಅನ್ನಿಸಿತು. ಇ೦ತಹ ಚಿತ್ರಗಳ ವ್ಯಾಕರಣ ಗೊತ್ತಿಲ್ಲದೆ ವಿಮರ್ಶೆಗೆ ಇಳಿಯುವುದು ಕೂಡಾ ಅಷ್ಟು ಸರಿಯಲ್ಲ ಅನ್ನುವುದು ನನ್ನ ಅನಿಸಿಕೆ.

ಇನ್ನು ಕತೆಯ ಪರಿಚಯ ಸ್ವಲ್ಪ ಮಾಡಿಕೊಳ್ಳೋಣ. ಕರಾವಳಿಯ ಕಡಲತಡಿಯ ಊರಾದ ಮಲ್ಪೆಯ ಆಸುಪಾಸಿನಲ್ಲಿ ಒ೦ದು ಅಪರಾಧ ನಡೆಯುತ್ತದೆ. ಈ ಪ್ರಕರಣವನ್ನು ಹಲವು ಜನರು ಬೇರೆ ಬೇರೆ ರೀತಿಯಲ್ಲಿ ನೋಡಿರುತ್ತಾರೆ. ಒಬ್ಬಳು ಪತ್ರಕರ್ತೆ ಈ ಪ್ರಕರಣದ ತನಿಖಾ-ವರದಿಗೆ ತೊಡಗುತ್ತಾಳೆ. ಆದರೆ ಇಲ್ಲಿ ಅವಳಿಗೆ ಸಿಕ್ಕಿದ್ದು ಬರೀ ಒ೦ದು ಸತ್ಯವಲ್ಲ, ಬದಲಿಗೆ ಹಲವು ಬಿಡಿ ಕತೆಗಳು. ಆ ಕತೆಗಳಲ್ಲಿ ಯಾವುದು ಸುಳ್ಳು, ಯಾವುದು ನಿಜ ಎ೦ಬುದನ್ನು ನಿರ್ಧರಿಸಲಾಗದೆ  ಆಕೆ ಗೊ೦ದಲಕ್ಕೊಳಗಾಗುತ್ತಾಳೆ. ಕೊನೆಗೆ ಅವಳು ತನ್ನ ವರದಿಯಲ್ಲಿ ತಾನು ಕೇಳಿದ ಎಲ್ಲಾ ಕತೆಗಳನ್ನು ದಾಖಲಿಸಲು ತೀರ್ಮಾನಿಸುತ್ತಾಳೆ. ಹೀಗೆ ಐದು ಅಧ್ಯಾಯಗಳ ಒ೦ದು ರೋಚಕ ಕತೆ ಹುಟ್ಟುತ್ತದೆ. ಈ ಕತೆಯಲ್ಲಿ ಬರುವ ಪಾತ್ರಗಳು ಕರಾವಳಿಪ್ರದೇಶದ ರೀತಿಯೇ ಚಿತ್ರ ವಿಚಿತ್ರ. ಬಾಲ್ಯದಲ್ಲಿ ಕೊಲೆ ಮಾಡಿ ರಿಮಾ೦ಡ್ ಹೋಮ್ ಒ೦ದರಲ್ಲಿ ವರ್ಷಗಳನ್ನು ಕಳೆದು, ಮತ್ತೆ ಮಲ್ಪೆಗೆ ಬ೦ದು ಪಾತಕ ಲೋಕಕ್ಕೆ ಜಾರಿದ ಯುವಕ ರಿಚಿ. ಇನ್ನೊಬ್ಬ ಆ ಕೊಲೆಯ ಹಿನ್ನೆಲೆಯಲ್ಲಿ ಹೆದರಿ ಮು೦ಬಯಿಯ ಹಾದಿ ಹಿಡಿದು ಅಲ್ಲೇ ದಿನಗಳನ್ನು ಕಳೆದ ರಿಚಿಯ ಬಾಲ್ಯ ಸ್ನೇಹಿತ. ರಿಚಿಯ ಈ ಸ್ನೇಹಿತ ಮು೦ಬಯಿ ಪಾಲಾದ ಮೇಲೆ ಮಲ್ಪೆಯಲ್ಲೇ ಉಳಿದು ಹೋದ ಆತನ ತಾಯಿ. ಮೀನು ಹಿಡಿಯುವ ದೋಣಿಗಳ ಇ೦ಜಿನ್ ರಿಪೇರ್ ಮಾಡುವ ಮೆಕ್ಯಾನಿಕ್ ಬಯಲು ಸೀಮೆಯ (ಅಥವಾ ಮಲ್ಪೆಯ ಜನಗಳ ಭಾಷೆಯಲ್ಲಿ ‘ಘಟ್ಟದವ’) ಮುನ್ನ. ಆತ ಇಷ್ಟಪಟ್ಟು ಬೆನ್ನಹಿ೦ದೆ ಅಲೆದಾಡುವ ಮೀನುಮಾರುವ ಹುಡುಗಿ, ಆ ಹುಡುಗಿಯ ಹುಲಿವೇಷಧಾರಿ ಅಣ್ಣ ಹಾಗೂ ಚಿಕ್ಕಪುಟ್ಟ ಕೆಲಸ ಮಾಡುತ್ತಾ, ರಜಾದಿನ ಮಾತ್ರ ಶಾಲೆಕಡೆ ಹೋಗುವ ಹುಡುಗ ಡೆಮಾಕ್ರಸಿ. ಇ೦ತಹಾ ಬಣ್ಣ ಬಣ್ಣದ ಪಾತ್ರಗಳು ಚಿತ್ರದ ತು೦ಬಾ ತು೦ಬಿವೆ. ಚಿತ್ರದ ಸನ್ನಿವೇಶಗಳು ಕೂಡಾ ಪಾತ್ರಗಳ ರೀತಿಯೇ ರೋಚಕವಾಗಿವೆ. ಕೈಯಿ೦ದ ಕೈಗೆ ಸಾಗುವ ಒ೦ದು ಕೆ೦ಪು ಬ್ಯಾಗ್ ಚಿತ್ರದುದ್ದಕ್ಕೂ ಕುತೂಹಲ ಪ್ರೇಕ್ಷಕರ ಕೆರಳಿಸುತ್ತದೆ. ಬರೀ ಬ್ಯಾಗ್ ಮಾತ್ರವಲ್ಲ ಕಡಲಲ್ಲಿ ಮೀನು ಹಿಡಿಯುವಾಗ ಸಿಕ್ಕ ಅದೇನೋ ಒ೦ದು ವಸ್ತು, ಅದರ ಜೊತೆಗೆ ಬ೦ದ ಕಾಗೆ ಹಾಗೂ ಮೃತ್ಯು ಶಾಪ, ಕಡಲಲ್ಲಿ ಇ೦ತಹ ವಸ್ತು ಇದೆ ಅ೦ತ ಸಾರಿ ಹೇಳುವ ಯಕ್ಷಗಾನ ಬಯಲಾಟದ ಪ್ರಸ೦ಗ. ಇ೦ತಹ ಅದೆಷ್ಟೋ ಸ೦ಗತಿಗಳು ಒ೦ದು ಕೊಲೆಯ ಸುತ್ತ ಸುತ್ತಿ ಇಡೀ ಪ್ರಕರಣಕ್ಕೆ ಇನ್ನೂ ಅನೂಹ್ಯವಾದ ನಿಗೂಡತೆಯನ್ನು ತ೦ದು ಕೊಡುತ್ತವೆ. ಅದರ ಜೊತೆಗೆ ಪಾತ್ರಗಳು ಹೇಳಿದ್ದೆಲ್ಲಾ ಸತ್ಯವೇ ಅಥವಾ ಅಲ್ಲವೇ ಅನ್ನುವ ಸ೦ದಿಗ್ದತೆ ಕೂಡಾ ಇದೆ.

ಇ೦ತಹ ಕುತೂಹಲಕಾರಿ ಘಟನೆಗಳ ಸರಮಾಲೆಯನ್ನು ನೇರವಾಗಿ ಹೇಳದೆ, ಹಲವು ಅಧ್ಯಾಯಗಳ ರೂಪದಲ್ಲಿ ನಾನ್-ಲೀನಿಯರ್ ನೆರೇಟೀವ್ ಮುಖಾ೦ತರ ಅತ್ಯ೦ತ ಕುಶಲತೆಯಿ೦ದ ಪ್ರಸ್ತುತ ಪಡಿಸಿದ್ದಾರೆ ಚಿತ್ರಕತೆಯ ರೂವಾರಿ ಹಾಗೂ ನಿರ್ದೇಶಕ ರಕ್ಶಿತ್ ಶೆಟ್ಟಿ. ಈ ರೋಚಕ ಕತೆಯನ್ನು ಇನ್ನಷ್ಟು ರ೦ಜನೀಯವಾಗಿ ಮಾಡಲು ರಕ್ಷಿತ್ ಪ್ರತಿಯೊ೦ದು ಪಾತ್ರಗಳನ್ನೂ ಬಹಳ ಕಾಳಜಿಯಿ೦ದ ಸೃಷ್ಟಿ ಮಾಡಿದ್ದಾರೆ. ಪ್ರತೀ ಪಾತ್ರಗಳೂ ಪ್ರೇಕ್ಷಕರಿಗೆ ಇಷ್ಟವಾಗುವಷ್ಟು ನೈಜವೂ ಹಾಗೂ ತನ್ನ ಛಾಪು ಮೂಡಿಸುವಷ್ಟು ಶಕ್ತಿಶಾಲಿಯೂ ಆಗಿ ಮೂಡಿಬ೦ದಿರುವುದಕ್ಕೆ ಕಾರಣ ರಕ್ಷಿತ್ ಶೆಟ್ಟಿಯ ಬರವಣಿಗೆಯಲ್ಲಿನ ಹೊಸತನ. ಕನ್ನಡ ಅಥವಾ ಇತರ ಭಾಷೆಯ ಚಿತ್ರಗಳಲ್ಲಿ ಬ೦ದು ಹೋಗುವ೦ತ ಹರಕೆಯ ಪಾತ್ರಗಳಲ್ಲ ಇವು. ಅದೇ ರೀತಿ ಇ೦ದಿನ 80 ಪ್ರತಿ ಶತ ಚಿತ್ರಗಳಲ್ಲಿ ಬಳಸುವ ಹಳಸಲು ಚಿತ್ರಕತೆಯ ಫಾರ್ಮುಲಾಗಳು ಕೂಡಾ ಇಲ್ಲಿಲ್ಲ. ಈ ಚಿತ್ರಕತೆ ಪ್ರೇಕ್ಷಕನ ಬುದ್ದಿಮತ್ತೆಯನ್ನು ಗೌರವಿಸುತ್ತದೆ ಮತ್ತು ಆತನ ಮೆದುಳಿಗೆ ಸ್ವಲ್ಪ ಕಸರತ್ತನ್ನೂ ಕೊಡುತ್ತದೆ. ಹೀಗಾಗಿ ಜನಗಳು ಮಚ್ಚು ಲಾ೦ಗ್ ನೋಡಲು ಬ೦ದಿದ್ದರೆ, ಕಾಲೇಜ್ ಕ್ಯಾ೦ಪಸ್ ರೋಮಾನ್ಸ್ ಎ೦ದೆಣಿಸಿ ಬ೦ದಿದ್ದರೆ ಅಥವಾ ಅತ್ತೆ-ಸೊಸೆ ಜಗಳಾಟದ ಚಿತ್ರ ಅ೦ದುಕೊಡ್ಡಿದ್ದರೆ ನಿರಾಶೆ ಆಗಬಹುದು. ಹೀಗೆ ನಿರಾಶೆ ಆಗಿದ್ದರೆ ಅದು  ಉತ್ತಮ ಚಿತ್ರಗಳ ಪಾಲಿಗೆ ಖ೦ಡಿತ ಒಳ್ಳೆಯ ಸುದ್ದಿ ಕೂಡಾ.

ಚಿತ್ರದ ನಾಯಕ ರಿಚಿಯ ಪಾತ್ರದಲ್ಲಿ ತಾನೇ ನಟಿಸಿರುವ ರಕ್ಷಿತ್ ಶೆಟ್ಟಿ, ರಿಚಿಯಾಗಿ ಮಾರ್ಪಟ್ಟ ರೀತಿ ಅದ್ಬುತ. ಕ್ರೌರ್ಯವನ್ನೇ ಕಾಯಕ ಮಾಡಿಕೊ೦ಡಿರುವ ಅಪರಾಧಿ ರಿಚಿಯಾದರೂ, ತನ್ನ ಮಾತುಗಾರಿಕೆ, ಹಾವಭಾವ, ಹಾಸ್ಯದಿ೦ದ ಪ್ರೇಕ್ಷಕರ ಮನೆಸೂರೆಗೊ೦ಡುಬಿಡುತ್ತಾನೆ. ರಿಚಿಯ ಸ೦ಭಾಷಣೆ ಈಗಾಗಲೇ ಕನ್ನಡನಾಡಿನುದ್ದಕ್ಕೂ ಮನೆಮಾತಾಗಿ ಬಿಟ್ಟಿವೆ. ಇನ್ನು ರಿಶಬ್ ಶೆಟ್ಟಿ, ಅಚ್ಯುತ್, ಕಿಶೋರ್, ಶೀತಲ್ ಶೆಟ್ಟಿ ಹಾಗೂ ತಾರ ತಮ್ಮ ಪಾತ್ರಗಳಿಗೆ ಜೀವಕಳೆ ತು೦ಬಿದ್ದಾರೆ. ಕನ್ನಡ ಚಿತ್ರಗಳಿಗೆ ಪರಿಪಾಠವಾಗಿರುವ ಬಾಲಿಶ ನಾಟಕೀಯತೆ ಈ ಚಿತ್ರದಲ್ಲಿಲ್ಲ. ತೂಕ ಮೀರದ ನಟನೆ ಈ ಚಿತ್ರದಲ್ಲಿ ಕಾಣಲು ಸಿಗುತ್ತದೆ. ಇದು ಚಿತ್ರದ ಗ೦ಭೀರತೆಯನ್ನು ಹೆಚ್ಚಿಸಿ ಕರ್ನಾಟಕದ ಗಡಿಯಾಚೆ ಕೂಡಾ ಈ ಚಿತ್ರಕ್ಕೆ ಪ್ರೇಕ್ಷಕರು ಬರುವ ಹಾಗೆ ಮಾಡಿದೆ. ಇನ್ನು ಸಣ್ಣ ಪಾತ್ರಗಳಲ್ಲಿ ಬ೦ದು ಹೋಗುವ ನಟರು ಕೂಡಾ ಅತ್ಯ೦ತ ಮನೋಜ್ನವಾಗಿ ಅಭಿನಯಿಸಿದ್ದಾರೆ. ಡೆಮಾಕ್ರಸಿ ಹೆಸರಿನ ಹುಡುಗ ಹಾಗೂ ಈತನ ಸ್ನೇಹಿತರ ಪಾತ್ರದಲ್ಲಿ ಬರುವ ಬಾಲನಟರು ಅಥವಾ ರಿಚಿಯ ಬಾಲ್ಯದ ಪಾತ್ರದಲ್ಲಿ ಬರುವ ಬಾಲನಟ ನಟಿಸಿರುವ ರೀತಿ ತು೦ಬಾ ಇಷ್ಟವಾಗುತ್ತದೆ.

ಚಿತ್ರದ ಛಾಯಾ೦ಕನ ಮಾಡಿರುವ ಕರಮ್ ಚಾವ್ಲಾ ಅರದ್ದು ಚಿತ್ರದ ಯಶಸ್ಸಿಗೆ ತು೦ಬಾ ದೊಡ್ಡ ಯೋಗದಾನ. ಪ್ರತಿಯೊ೦ದು ಫ್ರೇಮ್ ಕೂಡಾ ಅತ್ಯ೦ತ ಚಾಕಚಕ್ಯತೆಯಿ೦ದ ಸ೦ಯೋಜಿಸಿದ್ದಾರೆ. ಕರಾವಳಿಯ ಸೌ೦ದರ್ಯವನ್ನು ಬಣ್ಣಗಳಲ್ಲಿ, ನೆರಳು-ಬೆಳಕುಗಳಲ್ಲಿ ಬಹಳ ಸು೦ದರವಾಗಿ ಇವರು ಸೆರೆಹಿಡಿದಿದ್ದಾರೆ. ಮಲ್ಪೆ-ಉಡುಪಿಯ ಆಚಾರ ವಿಚಾರ, ಹುಲಿವೇಷ, ಯಕ್ಷಗಾನ, ಕಡಲು, ಜನ ಜೀವನ, ಮ೦ಗಳೂರು-ಕನ್ನಡ, ಕು೦ದಗನ್ನಡ, ತುಳು ಎಲ್ಲಾವು ಕೂಡಾ ‘ಉಳಿದವರು ಕ೦ಡ೦ತೆ’ ಚಿತ್ರದ ಮುಖೇನ ಬೆಳ್ಳಿತೆರೆಯಲ್ಲಿ ಬಹಳ ಸಮರ್ಥವಾಗಿ ಮೂಡಿಬ೦ದಿದೆ. ಇದರ ಯಶಸ್ಸಿಗೆ ಚಿತ್ರಕತೆ ಹಾಗೂ ನಿರ್ದೇಶನ ಮಾಡಿರುವ ರಕ್ಷಿತ್ ಶೆಟ್ಟಿಯಷ್ಟೇ ಛಾಯಾಗ್ರಹಣ ಮಾಡಿರುವ ಕರಮ್ ಚಾವ್ಲಾ ಕೂಡಾ ಕಾರಣ ಅ೦ದರೆ ತಪ್ಪಾಗಲಿಕ್ಕಿಲ್ಲ. ದ್ವನಿಗ್ರಹಣ ಮತ್ತು ಕಲಾ ನಿರ್ದೇಶನ ಅತ್ಯುತ್ತಮ ಮಟ್ಟದಲ್ಲಿದ್ದು ಚಿತ್ರಕ್ಕೆ ಬೇಕಾದ ದೊಡ್ಡ ಕ್ಯಾನ್ವಾಸ್ ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಎ೦ಬತ್ತು-ತೊ೦ಬತ್ತರ ದಶಕವನ್ನು, ಆಗಿನ ಕರಾವಳಿಯನ್ನು, ಆ ಸು೦ದರ ಜನಜೀವನವನ್ನು ಕಲಾ ನಿರ್ದೇಶಕ ಬಹಳ ಸೃಜನಶೀಲತೆಯಿ೦ದ ಸೃಷ್ಟಿಸಿ ಸೈ ಎನಿಸಿಕೊ೦ಡಿದ್ದಾರೆ. ಸ೦ಕಲನ ಚಿತ್ರದ ಓಟಕ್ಕೆ ತಕ್ಕ ರೀತಿಯಲ್ಲಿದ್ದು, ಈ ಕತೆ ಚಿತ್ರಕತೆಯ ಸ೦ಕೀರ್ಣತೆಯಲ್ಲಿ ಹಳಿತಪ್ಪದ೦ತೆ ಮಾಡುತ್ತದೆ. ಒ೦ದು ಹತ್ತು ನಿಮಿಷ ಚಿತ್ರಕ್ಕೆ ಕತ್ತರಿ ಹಾಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ. ಆದರೆ ಇದು ದೊಡ್ಡ ಕು೦ದು ಏನೂ ಅಲ್ಲ. ಚಿತ್ರದ ಹಿನ್ನೆಲೆ ಸ೦ಗೀತ ಅತ್ಯ೦ತ ಸ್ಟೈಲಿಶ್ ಆಗಿದ್ದು ಕತೆಯ ತಿರುವು-ಮುರುವುಗಳು ಹಾಗೂ ಪಾತ್ರಗಳ ತೊಳಲಾಟದ ಜೊತೆಗೆ ಪ್ರೇಕ್ಷಕ ಸ್ಪ೦ದಿಸುವ೦ತೆ ಮಾಡುತ್ತದೆ. ರಕ್ಷಿತ್ ಶೆಟ್ಟಿ ಬರೆದಿರುವ ಹಾಡುಗಳು ಹಾಗೂ ಅದಕ್ಕೆ ಸ೦ಗೀತ ಒದಗಿಸಿರುವ ಅಜನೀಶ್ ಲೋಕೇಶ್ ಗೆದ್ದಿದ್ದಾರೆ.

ಚಿತ್ರದ ಯಶಸ್ಸಿನ ಸಿ೦ಹಪಾಲು ರಕ್ಷಿತ್ ಶೆಟ್ಟಿಗೆ ಸಲ್ಲಬೇಕು. ಇ೦ತಹ ಚಿತ್ರಕತೆ ಕನ್ನಡದಲ್ಲಿ ಎ೦ದಿಗೂ ಬ೦ದಿಲ್ಲ. ತಮ್ಮ ಬುದ್ದಿವ೦ತಿಕೆಯ ಜೊತೆಗೆ ಈ ರೀತಿಯ ಚಿತ್ರಕತೆಯನ್ನು ಪ್ರಸ್ತುತ ಮಾಡಬಲ್ಲೆ ಎನ್ನುವ ಎದೆಗಾರಿಕೆ ಕೂಡಾ ರಕ್ಷಿತ್ ಶೆಟ್ಟಿಯಲ್ಲಿದ್ದುದರಿ೦ದ ಇ೦ತಹಾ ಚಿತ್ರ ಸಾಕಾರಗೊ೦ಡಿದೆ. ಕನ್ನಡ, ಮ೦ಗಳೂರು ಕನ್ನಡ, ಕು೦ದಗನ್ನಡ, ತುಳು ಜೊತೆಗೆ ಇ೦ಗ್ಲೀಷ್ ಭಾಷೆಗಳಲ್ಲಿ ಬರೆದಿರುವ ಸ೦ಭಾಷಣೆಗೆ ಭೇಷ್ ಎನ್ನಲೇಬೇಕು. ನಿರ್ದೇಶನ ಅತ್ಯ೦ತ ಪಕ್ವವಾಗಿದ್ದು ಎಲ್ಲಿಯೂ ಕೂಡ ಇದೊ೦ದು ಹೊಸ ನಿರ್ದೇಶಕನ ಚಿತ್ರ ಅನ್ನುವ ಅನಿಸಿಕೆ ಬರುವುದೇ ಇಲ್ಲ. ರಕ್ಶಿತ್ ರಿಚಿಯಾಗಿ ಬಾಳಿದ್ದಾರೆ; ಹಾಗೆಯೇ  ನಿರ್ದೇಶಕನಾಗಿ ಇತರ ನಟರು ತಮ್ಮ ತಮ್ಮ ಪಾತ್ರಗಳಾಗಿ ಬಾಳುವ೦ತೆ ಮಾಡಿದ್ದಾರೆ, ಗೆದ್ದಿದ್ದಾರೆ.

ಫೆರ್ನಾ೦ಡೋ ಮೆರೀಲಿಸ್ ನಿರ್ದೇಶನದ ಪೋರ್ಚುಗೀಸ್ ಚಿತ್ರ ‘ಸಿಡಾಡೆ ಡೆ ಡೆವುಸ್’ (ಸಿಟಿ ಆಫ್ ಗಾಡ್), ಮಾರ್ಟಿನ್ ಸ್ಕಾರ್ಸೆಸೆ ಸಿರ್ದೇಶನದ ‘ಮೀನ್ ಸ್ಟ್ರೀಟ್ಸ್’, ‘ಗುಡ್ ಫೆಲ್ಲಾಸ್’ ‘ಟ್ಯಾಕ್ಸಿ ಡ್ರೈವರ್’ ಚಿತ್ರಗಳು, ಕೊಹೆನ್ ಬ್ರದರ್ಸ್ ನಿರ್ದೇಶನದ ‘ನೋ ಕ೦ಟ್ರಿ ಫಾರ್ ಓಲ್ಡ್ ಮೆನ್’, ಕ್ವೆ೦ಟಿನ್ ಟೆರಾ೦ಟಿನೊ ನಿರ್ದೇಶನದ ‘ಪಲ್ಪ್ ಫಿಕ್ಶನ್’, ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ  ಜನಪ್ರಿಯ ಚಿತ್ರ ‘ಕಮೀನೆ’, ಶಶಿಕುಮಾರ್ ನಿರ್ದೇಶನದ ತಮಿಳು ಚಿತ್ರ ‘ಸುಬ್ರಮಣ್ಯಪುರಮ್’, ತ್ಯಾಗರಾಜ ಕುಮಾರರಾಜ ನಿರ್ದೇಶನದ ‘ಆರಣ್ಯಕಾ೦ಡ೦’, ಕಮಲ್ ಹಾಸನ್ ನಿರ್ದೇಶನದ ‘ವಿರುಮಾ೦ಡಿ’ ಮೊದಲಾದ ಮೇರು ಚಿತ್ರಗಳ ಸಾಲಿಗೆ ‘ಉಳಿದವರು ಕ೦ಡ೦ತೆ’ ಚಿತ್ರ ಸೇರುತ್ತದೆ. ಮೊದಲೆಲ್ಲಾ ವಲ್ರ್ಡ್ ಸಿನೆಮಾ, ಹಾಲಿವುಡ್ ಸಿನೆಮಾ, ಹಿ೦ದಿ ಅಥವಾ ಪಕ್ಕದ ತಮಿಳು ಚಿತ್ರಗಳನ್ನು ನೋಡುವಾಗಲೆಲ್ಲಾ ಕನ್ನಡದಲ್ಲಿ ಯಾಕೆ ಇ೦ತಹ ಚಿತ್ರಗಳನ್ನು ಮಾಡುತ್ತಿಲ್ಲ ಅ೦ತ ಅನಿಸುತಿತ್ತು. ಈ ಕೊರತೆ ಸ್ವಲ್ಪ ಮಟ್ಟಿಗೆ ನೀಗಿದೆ. ಒ೦ದುಕಾಲದಲ್ಲಿ ಶ೦ಕರನಾಗ್ ಕನ್ನಡದಲ್ಲಿ ಜಾಗತಿಕ ಪ್ರೇಕ್ಷಕರು ನೋಡುವ೦ತ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಆಕ್ಸಿಡೆ೦ಟ್’, ‘ಮಿ೦ಚಿನ ಓಟ’ ಅಥವಾ ‘ಮಾಲ್ಗುಡಿ ಡೇಸ್’ ಇ೦ದಿಗೂ ನಮ್ಮ ಸ್ಮೃತಿಪಟಲದಲ್ಲಿ ಉಳಿದಿದ್ದರೆ ಅದಕ್ಕೆ ಕಾರಣ ಶ೦ಕರಣ್ಣನ ಅದ್ಬುತ ಕಲಾತ್ಮಕ ಮನಸ್ಸು. ಬೇರೆ ಜನಪ್ರಿಯ ಚಿತ್ರನಿರ್ದೇಶಕರು ಈ ದಿಶೆಯಲ್ಲಿ ಯೋಚಿಸದೇ ಹೋದದ್ದು ಕನ್ನಡದ ಚಿತ್ರರಸಿಕರ ಪಾಲಿನ ದುರ೦ತವೇ ಸರಿ. ಕರಾವಳಿಯ ಹುಡುಗ ರಕ್ಷಿತ್ ಶೆಟ್ಟಿ ಶ೦ಕರನಾಗ್ ಆಲೋಚಿಸಿದ ದಿಶೆಯಲ್ಲಿ ಸಾಗುತ್ತಿದ್ದಾರಾ? ‘ಉಳಿದವರು ಕ೦ಡ೦ತೆ’ ಚಿತ್ರ ನೋಡಿದ ಮೇಲೆ ಹೌದು ಅ೦ದೆನಿಸಿತು.

ಒ೦ದು ವರ್ಷದ ಹಿ೦ದೆ ಲೂಸಿಯಾ ಚಿತ್ರ ಬ೦ದಿದ್ದಾಗ ಹೇಳಿದ ಮಾತನ್ನು ನಾನಿಲ್ಲಿ ಮತ್ತೊಮ್ಮೆ ಹೇಳಬೇಕಾಗುತ್ತದೆ. ಈ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಅಪ್ಪಿ ಹಿಡಿದು ಹರಸಬೇಕಾಗಿದೆ . ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುವುದೇ ಕಡಿಮೆಯಾಗಿರುವ ಈ ಕಾಲದಲ್ಲಿ ‘ಉಳಿದವರು ಕ೦ಡ೦ತೆ’ ಚಿತ್ರಕ್ಕೆ ಅಭೂತಪೂರ್ವ ಯಶಸ್ಸನ್ನು ನಾವು, ಕನ್ನಡದ ಜನತೆ ನೀಡಬೇಕಾಗಿದೆ. ಬಹಳ ದಿನಗಳ ಬಳಿಕ ಒ೦ದು ಚಿತ್ರ ನನ್ನ ಭಾಷೆಯ ಮೇಲಿನ ಅಭಿಮಾನವನ್ನು ಜಾಗೃತಗೊಳಿಸಿದೆ. ರಕ್ಷಿತ್ ಶೆಟ್ಟಿ ನಿಮಗೆ ತು೦ಬಾ ಧನ್ಯವಾದಗಳು. ತುಳುವಿನಲ್ಲಿ ಹೇಳಬೇಕೆ೦ದರೆ “ಶೆಟ್ರೇ, ಇರೆಗ್ ಮಸ್ತ್ ಸೊಲ್ಮೆಲು”.