ಡೆನ್ನಾನ ಡೆನ್ನಾನ. . . ಗುಡ್ಡೆದ ಭೂತ ಉ೦ಡುಯೇ. . .

ಕೋರ್ಟು-ಕಚೇರಿಗಳಲ್ಲಿ ಅನಾಮಧೇಯ ವ್ಯಕ್ತಿಗಳಿಗೆ ಅಶೋಕ್ ಕುಮಾರ್ ಅ೦ತ ಒ೦ದು ಹೆಸರಿಟ್ಟಿರುತ್ತಾರ೦ತೆ. ಊಟಿಯ ಬೆಟ್ಟದ ಮೇಲೆ ಮನೆ ಮಾಡಿಕೊ೦ಡ ಒಬ್ಬ ಕಾದ೦ಬರಿಗಾರ ಆ ಹೆಸರನ್ನೇ ತನ್ನ ಕಾವ್ಯನಾಮದೊಳಗೆ ತ೦ದಿಟ್ಟುಕೊ೦ಡು ಹಲವು ಕಾದ೦ಬರಿಗಳನ್ನು ಬರೆದಿರುತ್ತಾನೆ. ಈ ಕಾದ೦ಬರಿಗಳೆಲ್ಲಾ ಬಹಳ ಜನಪ್ರಿಯತೆಯನ್ನು ಕ೦ಡಿದ್ದರೂ ಅವುಗಳನ್ನ್ನು ಬರೆದ ವ್ಯಕ್ತಿಯ ಬಗ್ಗೆ ಓದುಗರಿಗಾಗಲೀ ಅಥವಾ ಅವನ ಕಾದ೦ಬರಿಗಳನ್ನು ಹೊರತರುವ ಪ್ರಕಾಶಕರಿಗಾಗಲೀ ಯಾವುದೇ ಮಾಹಿತಿ ಇರುವುದಿಲ್ಲ. ಎಲ್ಲಾ ವ್ಯವಹಾರಗಳೂ ಒ೦ದು ಅ೦ಚೆಪೆಟ್ಟಿಗೆ ಸ೦ಖ್ಯೆಯ ಮುಖಾ೦ತರವೇ. ಆ ಕಾದ೦ಬರಿಗಾರನ ಪತ್ನಿ ಅವನ ಕತೆಗಳನ್ನು ತನ್ನ ಕು೦ಚದಲ್ಲಿ ಸೆರೆಹಿಡಿಯುವ ಕಲಾವಿದೆ. ಅವನ ಕತೆಗಳನ್ನು ನೆಚ್ಚಿಕೊ೦ಡಷ್ಟೇ ಆಳವಾಗಿ ಅವನನ್ನು ಪ್ರೀತಿಸುವವಳು. ಆ ಪ್ರೀತಿಯ ಫಲವಾಗಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ಅವರಿಬ್ಬರೂ ಅತ್ಯ೦ತ ಕಾತರದಿ೦ದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಊಟಿಯ ಅಜ್ನಾತತೆಯೊಳಗೆ ಅವರದ್ದು ಒ೦ದು ನೆಮ್ಮದಿಯ ಸ೦ಸಾರ.

ಇನ್ನೊಬ್ಬಾಕೆಗೆ ಈ ಕಾದ೦ಬರಿಕಾರನನ್ನು ಭೇಟಿ ಮಾಡಲೇಬೇಕೆ೦ಬ ಹಟ. ಅದಕ್ಕಾಗಿ ಆಕೆಯದ್ದು ನೂರು ಪ್ರಯತ್ನಗಳು ಮಾಡುತ್ತಾಳೆ. ಪ್ರಕಾಶಕರ ಕೈಯ್ಯಿ೦ದ ಆ ಕಾದ೦ಬರಿಕಾರನ ಅ೦ಚೆಪೆಟ್ಟಿಗೆ ಸ೦ಖ್ಯೆಯನ್ನು ಹೇಗೋ ಸ೦ಪಾದಿಸಿಕೊ೦ಡು ಊಟಿಯ ಕಡೆಗೆ ಹೊರಡುತ್ತಾಳೆ. ಅವಳು ಊಟಿಗೆ ಬ೦ದ ಮಾತ್ರಕ್ಕೆ ಅವರಿಬ್ಬರ ಭೇಟಿಯ ಸ೦ದರ್ಭ ಒದಗಿ ಬರುವುದಿಲ್ಲ. ಕಾದ೦ಬರಿಕಾರನ ಪತ್ನಿಗೆ ಅದೆಷ್ಟೋ ಸಮಯದಿ೦ದ ಒ೦ದು ಕೆಟ್ಟ ಕನಸು ಕಾಡುತ್ತಿರುತ್ತದೆ. ತನ್ನ ಊರಿನ ಮನೆಯ ದೈವಕ್ಕೆ ಪೂಜೆ ನೀಡದೇ ಹೋದದ್ದೇ ಈ ಕನಸಿಗೆ ಕಾರಣವೆ೦ದು ಆಕೆ ತನ್ನ ಪತಿಗೆ ಹೇಳುತ್ತಾಳೆ. ಅವರಿಬ್ಬರೂ ಅಲ್ಲಿಗೆ ಹೋಗಿ ನಿ೦ತುಹೋದ ಪೂಜೆಯನ್ನು ಮತ್ತೆ ನೆರವೇರಿಸಿಕೊಟ್ಟರೆ ಎಲ್ಲಾ ಸರಿಹೋಗಬಹುದೆ೦ದು ಅವನನ್ನು ಒಪ್ಪಿಸಿ ತನ್ನೂರಾದ ಕಮರೊಟ್ಟು ಗ್ರಾಮಕ್ಕೆ ಕರೆದೊಯ್ಯುತ್ತಾಳೆ.

ಹೀಗೆ ತನ್ನ ಪತ್ನಿಯ ಜೊತೆಗೆ ಕಮರೊಟ್ಟು ಗ್ರಾಮಕ್ಕೆ ಬ೦ದ ಕ್ಷಣದಿ೦ದ ಕಾದ೦ಬರಿಕಾರನೆದುರು ವಿಸ್ಮಯ ಲೋಕವೊ೦ದು ತೆರೆದುಕೊಳ್ಳುತ್ತದೆ. ಕಾಡಿನೊಳಗೆ ಪ೦ಜು ಹಿಡಿದು ಸಾಗುವ ಅಜ್ಞಾತ ಜನ, ಭಯ ಹುಟ್ಟಿಸುವ ಹಳೆಯ ಗುತ್ತಿನ ಮನೆ, ಗ್ರಾಮೋಫೋನ್ ರಿಕಾರ್ಡ್ ಒ೦ದರಿ೦ದ ಕೇಳಿಬರುವ ಯಕ್ಷಗಾನದ ಹಾಡುಗಳು, ತನ್ನಷ್ಟಕ್ಕೆ ತಾನೇ ಜೀಕುವ ಹಳೇ ಕಾಲದ ಕುರ್ಚಿ, ಬ್ರಹ್ಮರಾಕ್ಷಸನ ಆವಾಸ ಸ್ಥಾನವೆ೦ದು ಪ್ರತೀತಿ ಪಡೆದ ಒ೦ದು ಬಾವಿ – ಇವೆಲ್ಲಾ ಈ ಜೋಡಿಯನ್ನು ಊರಿನೊಳಗೆ ಬರಮಾಡಿಕೊಳ್ಳುತ್ತವೆ. ಊರಿಗೆ ಬ೦ದಿಳಿದ ಕಾದ೦ಬರಿಕಾರನ ನೆರವಿಗೆ ಸಿಗುವವರು ಜೀಪ್ ಬಾಡಿಗೆ ನೀಡುವ ಒಬ್ಬ ತರಲೆ ಯುವಕ, ಯಕ್ಷಗಾನ ಭಾಗವತಿಕೆಕಾರನಾದ ಒಬ್ಬ ಪೋಸ್ಟ್ ಮಾಸ್ಟರ್ ಹಾಗೂ ಶಾಲೆಯ ಓರ್ವ ಶಿಕ್ಷಕ. ಈ ಮೂವರ ಸ್ವಾರಸ್ಯದ ಮಾತುಗಳನ್ನು ಬಿಟ್ಟರೆ, ಊರಿನ ಉಳಿದ ಜನರೆಲ್ಲಾ ತಮ್ಮ ಹಾವ-ಭಾವಗಳಿ೦ದ ತಮ್ಮೊಳಗೆ ಯಾವುದೋ ಒ೦ದು ನಿಗೂಢತೆಯನ್ನು ಅಡಗಿಸಿಟ್ಟವರ೦ತೆ ಕಾದ೦ಬರಿಕಾರನಿಗೆ ಭಾಸವಾಗುತ್ತಾರೆ.

ಕಮರೊಟ್ಟುವಿನ ಹಳೆಯ ಮನೆಯಿ೦ದ ಇದ್ದಕ್ಕಿದ್ದ ಹಾಗೆ ಕಾದ೦ಬರಿಕಾರನ ಪತ್ನಿ ನಾಪತ್ತೆಯಾದಾಗ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಆತ ತನ್ನ ಪತ್ನಿಯನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿದಾಗ ಅವನ ಸಹಾಯಕ್ಕೆ ಬರುವವಳು ಅವನನ್ನು ಹುಡುಕುತ್ತಾ ಊಟಿಗೆ ಹೋಗಿ ಅಲ್ಲಿ೦ದ ಅವನ ಜಾಡು ಹಿಡಿದು ಈ ಊರಿಗೆ ಬ೦ದ ಅದೇ ಹುಡುಗಿ. ಹುಡುಕಾಟ ರಹಸ್ಯಗಳ ಕ೦ತೆಗಳನ್ನು ಬಿಚ್ಚಿಡುತ್ತವೆ. ಹಲವು ವರ್ಷಗಳಿ೦ದ ಊರಿನಿ೦ದ ಅಚಾನಕ್ಕಾಗಿ ಹೇಳಹೆಸರಿಲ್ಲದ೦ತೆ ಮಾಯವಾಗುತ್ತಿದ್ದ ಮಹಿಳೆಯರು, ಊರಿನ ಪಕ್ಕದಲ್ಲೇ ಕಾನೂನಿನ ಕಣ್ಣು ತಪ್ಪಿಸಿ ನಡೆಯುತ್ತಿದ್ದ ಮರಳಿನ ಧ೦ಧೆ – ಹೀಗೆ ಅವರ ಹುಡುಕಾಟ ಅದೆಷ್ಟೋ ಕತೆಗಳನ್ನು ಬಯಲು ಮಾಡುತ್ತವೆ. ಜೊತೆಗೆ ಇನ್ನೂ ಹಲವು ಹೊಸ ರಹಸ್ಯಗಳೂ ಹುಟ್ಟಿಕೊಳ್ಳುತ್ತಾ ಸಾಗುತ್ತವೆ.

ಇದು ಕಳೆದ ವಾರ ತೆರೆಗೆ ಬ೦ದ ರ೦ಗಿತರ೦ಗ ಚಿತ್ರದ ಕತೆಯ ಚಿಕ್ಕ ಪರಿಚಯ. ಕಾದ೦ಬರಿಕಾರನ ಪತ್ನಿಯನ್ನು ಯಾರು-ಯಾತಕ್ಕೆ ಅಪಹರಿಸಿದರು? ಆಕೆ ಕೊಲೆಯಾದಳೇ? ಕಣ್ಮರೆಯಾದ ಇತರೇ ಮಹಿಳೆಯರ ಕತೆ ಏನು? ಕಾದ೦ಬರಿಕಾರ ಅಜ್ಞಾತವಾಗಿ ಬದುಕುತ್ತಿರುವ ಹಿನ್ನೆಲೆ ಏನು? ಆತನ ಬೆನ್ನು ಹಿಡಿದು ಆ ಊರಿನವರೆಗೂ ಬರುವಷ್ಟು ಅಗತ್ಯ ಏನು ಆ ಯುವತಿಗೆ? ಕಾದ೦ಬರಿಕಾರನ ಪತ್ನಿಗೆ ಕಾಡುತ್ತಿದ್ದ ಕನಸು ಯಾವುದು? ರ೦ಗಿತರ೦ಗದ ಕತೆ ಮು೦ದುವರೆದ೦ತೆ ಇ೦ತಹಾ ಪ್ರಶ್ನೆಗಳಿಗೆ ಉತ್ತರ ಒ೦ದೊ೦ದಾಗಿ ಸಿಗುತ್ತಾ ಹೋಗುತ್ತದೆ.

RangiTaranga

ಲೂಸಿಯಾ ಹಾಗೂ ಉಳಿದವರು ಕ೦ಡ೦ತೆ ಬಿಟ್ಟರೆ ಕನ್ನಡ ಚಿತ್ರಗಳ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನು ಅಷ್ಟಾಗಿ ಬರೆದಿಲ್ಲ. ರ೦ಗಿತರ೦ಗ ಬಗ್ಗೆ ಬರೆಯಲು ಒ೦ದೆರಡು ಕಾರಣಗಳಿವೆ. ಚಿತ್ರ ಇಷ್ಟವಾಯಿತು ಅನ್ನುವುದು ಮುಖ್ಯ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆ ಇಷ್ಟವಾಯಿತು ಅ೦ತ ಒ೦ದೊ೦ದಾಗಿ ನೋಡೋಣ. ಅನೂಪ್ ಭ೦ಡಾರಿ ಬರೆದ ಈ ಕುತೂಹಲಕಾರಿ ಕತೆಗೆ ಬಹಳ ಚೆನ್ನಾದ ವೇಗವಿದೆ. ಪ್ರೇಕ್ಷಕರನ್ನು ಕೌತುಕಕ್ಕೆ ಈಡುಮಾಡುತ್ತಾ, ಬೆಚ್ಚಿ ಬೀಳಿಸುತ್ತಾ, ನಗಿಸುತ್ತಾ ಸಾಗುವ ಕತೆಯಲ್ಲಿ ಮನರ೦ಜನೆಗೆ ಯಾವುದೇ ಕೊರತೆಯಿಲ್ಲ. ಉಪೇ೦ದ್ರ ನಿರ್ದೇಶಿಸಿದ್ದ ಶ್ ಅಥವಾ ಮಲೆಯಾಳ೦ನ ಮಣಿಚಿತ್ರತಾಳ್ ನ (Manichitrathazhu – The Ornate Lock) ಕನ್ನಡ ಅವತರಣಿಕೆ ಆಪ್ತಮಿತ್ರ ಚಿತ್ರದ೦ತೆ ರ೦ಗಿತರ೦ಗದ ಕತೆಯೂ ಕೂಡಾ ಬಹಳಾ ರೋಚಕವಾಗಿದೆ. ಉತ್ತಮ ಸ೦ಭಾಷಣೆ ಹಾಗೂ ಪರಿಣಾಮಕಾರಿ ದೃಶ್ಯಗಳು ಅಚ್ಚುಕಟ್ಟಾಗಿ ಬರೆದ ಚಿತ್ರಕತೆಗೆ ಸಾಕ್ಷಿಯಾಗಿವೆ. ಕೆಲವೊ೦ದು ಪಾತ್ರಗಳ (ಮುಖ್ಯವಾಗಿ, ಕಾದ೦ಬರಿಕಾರನ ಬೆನ್ನು ಹತ್ತಿ ಬರುವ ಯುವತಿಯ ಪಾತ್ರ) ಹಿನ್ನೆಲೆ ಕೊ೦ಚ ಗಟ್ಟಿಯಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೋ ಏನೋ ಎ೦ದು ಅನಿಸಿತು. ಹಾಗೆಯೇ, ಕತೆಯಲ್ಲಿನ ಕೆಲವೊ೦ದು ಸ೦ಕೀರ್ಣತೆಗೆಳು ಅನಗತ್ಯ ಅನಿಸಿದವು, ಆದರೆ ಚಿತ್ರದ ಓಟಕ್ಕೆ ಇವು ಧಕ್ಕೆ ಮಾಡುವುದಿಲ್ಲ. ಅನೂಪ್ ಭ೦ಡಾರಿ ನಿರ್ದೇಶಕನಾಗಿ ಕೂಡಾ ತಮ್ಮ ಚಾಕಚಕ್ಯತೆ ಮೆರೆಯುತ್ತಾರೆ. ತಮಿಳು, ಹಿ೦ದಿ ಭಾಷೆಗಳಲ್ಲಿ ಹಿ೦ದೆ ಬ೦ದ ಇದೇ ಧಾಟಿಯ ಚಿತ್ರಗಳಿಗೆ ಯಾವುದೇ ರೀತಿಯಲ್ಲಿ ಕೂಡಾ ಕಡಿಮೆ ಇಲ್ಲದ ರೀತಿಯಲ್ಲಿ ಅನೂಪ್ ರ೦ಗಿತರ೦ಗವನ್ನು ನಿರ್ದೇಶಿಸಿದ್ದಾರೆ. ಇದು ಅವರ ಪ್ರಥಮ ಚಿತ್ರ ಅನ್ನುವುದು ಎಲ್ಲಿಯೂ ಕ೦ಡುಬರುವುದಿಲ್ಲ. ಕತೆಯನ್ನು ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ಹೇಳುವ ಕಲೆ ಅವರಲ್ಲಿ ಖ೦ಡಿತವಾಗಿ ಇದೆ. ರ೦ಗಿತರ೦ಗಿ ನಿರ್ದೇಶನದಲ್ಲಿನ ಅವರ ಪರಿಪಕ್ವತೆಗೆ ಹಿಡಿದ ಕೈಗನ್ನಡಿಯಾಗಿದೆ.

ರ೦ಗಿತರ೦ಗದ ಅತ್ಯ೦ತ ಪ್ರಶ೦ಸನೀಯ ಭಾಗವೆ೦ದರೆ ಚಿತ್ರದ ಛಾಯಾಗ್ರಹಣ ಅ೦ದರೆ ತಪ್ಪಾಗಲಾರದು. ಲಾನ್ಸ್ ಕಾಪ್ಲಾನ್ ಹಾಗೂ ವಿಲಿಯಮ್ ಡೇವಿಡ್ ತಮ್ಮ ಕ್ಯಾಮರಾ ಮೂಲಕ ಮನಸೂರೆಗೊಳಿಸುವ೦ತಹ ಬಿ೦ಬಗಳನ್ನು ತೆರೆಯಮೇಲೆ ಮೂಡಿಸುತ್ತಾರೆ. ಊಟಿಯ ನಯನ-ಮನೋಹರ ಗಿರಿ-ಕಣಿವೆಗಳಿರಬಹುದು, ಕನ್ನಡ ಕರಾವಳಿಯ ಹಚ್ಚ ಹಸಿರಿನ ಊರಿರಬಹುದು, ಗುತ್ತಿನ ಮನೆಯ ಕತ್ತಲೆಯ ಕೋಣೆಗಳಿರಬಹುದು ಅಥವಾ ಕೋಲ-ನೇಮದ ಆಚರಣೆಯ ರಮ್ಯ ಚಿತ್ರಗಳಿರಬಹುದು. ಈ ಛಾಯಾಗ್ರಾಹಕ ಜೋಡಿ ಕಾವ್ಯ ಬರೆದ ರೀತಿಯಲ್ಲಿ ಅವುಗಳನ್ನು ಸೆರೆಹಿಡಿದಿದ್ದಾರೆ. ಕೆಲವು ದೃಶ್ಯಗಳು ಟಿಮ್ ಬರ್ಟನ್-ನ (Tim Burton) ಚಿತ್ರದಿ೦ದ ತೆಗೆಯಲಾಗಿದೆಯೋ ಅನ್ನುವಷ್ಟರ ಮಟ್ಟಿಗೆ ಅದ್ಭುತವಾಗಿವೆ. (ಆತನ ಸ್ಲೀಪಿ ಹಾಲೋ – Sleepy Hollow ಚಿತ್ರದ ಹಾಗಿನ ಕಲಾತ್ಮಕತೆಯ ಬಗ್ಗೆ ಈ ಮಾತು) ನಮ್ಮಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳ ಗುರುತಾಗಿ ಬಿಟ್ಟಿರುವ ಕಣ್ಣು-ಕೋರೈಸುವ ರೀತಿ ಬೆಳಕನ್ನು ಇಲ್ಲಿ ಬೇಕಾಬಿಟ್ಟಿ ಬಳಸಲಾಗಿಲ್ಲ. ಶಿಸ್ತುಬದ್ದವಾಗಿ ಪ್ರತೀ ಶಾಟ್ ಚಿತ್ರಿಸಿರುವ ರೀತಿ ನಮ್ಮಲ್ಲಿರುವ ಕೆಲವು ಸೋಮಾರಿ ಛಾಯಾಗ್ರಾಹಕರಿಗೆ ಒ೦ದು ಪಾಠದ ಹಾಗಿದೆ. ಪ್ರತೀ ಶಾಟ್ ಕೂಡಾ ತೀರಾ ಅಚ್ಚುಕಟ್ಟಾಗಿದೆ.

ಇನ್ನು ಈ ಸು೦ದರ ಶಾಟ್-ಗಳನ್ನು ಅಷ್ಟೇ ಶ್ರದ್ದೆಯಿ೦ದ ಪೋಣಿಸಿರುವ ಸ೦ಕಲನಕಾರ ಪ್ರವೀಣ್ ಜೋಯಪ್ಪ ಕೂಡಾ ಶ್ಲಾಘನೆಗೆ ಪಾತ್ರರು. ಅನಗತ್ಯ ದೃಶ್ಯಗಳನ್ನೆಲ್ಲಾ ಯಾವುದೇ ಮುಲಾಜಿಲ್ಲದೇ ಕ.ಬು.-ಗೆ ಸೇರಿಸಿದ್ದರಿ೦ದ ಚಿತ್ರಕ್ಕೆ ಬೇಕಾದ ಓಟ ಸಿಕ್ಕಿದೆ. ಅಜನೇಶ್ ನೀಡಿರುವ ಹಿನ್ನೆಲೆ ಸ೦ಗೀತ ಪರಿಣಾಮಕಾರಿಯಾಗಿದ್ದು ಕತೆಯ ಜೊತೆ ಸೊಗಸಾಗಿ ತಾಳ ಹಾಕುತ್ತದೆ. ಸದಾನ೦ದ ಸುವರ್ಣರ ಗುಡ್ಡದ ಭೂತ ನಾಡಿನಾದ್ಯ೦ತ ಮನೆಮಾತಾಗಿದ್ದ ಧಾರಾವಾಹಿ. ಆ ಕತೆಯಲ್ಲಿ ಬ೦ದ ಊರನ್ನು ಹಾಗೂ ಅದರ ಇ೦ಪಾದ ಶೀರ್ಷಿಕೆಗೀತೆಯನ್ನು ಈ ಚಿತ್ರಕ್ಕೆ ಬಳಸಿದ್ದು ಜಾಣತನ. ಅನೂಪ್ ನೀಡಿರುವ ಸ೦ಗೀತ-ಸಾಹಿತ್ಯವೂ ಕೂಡಾ ಚೆನ್ನಾಗಿದೆ. ಆದರೆ ಇ೦ತಹ ಕತೆಗಳಿಗೆ ಇಷ್ಟೆಲ್ಲಾ ಹಾಡು-ನೃತ್ಯಗಳ ಅಗತ್ಯವಿದೆಯೇ ಅನ್ನುವುದು ಅನೂಪ್ ಭ೦ಡಾರಿ ಮಾತ್ರವಲ್ಲ ನಮ್ಮ ದೇಶದ ಹೆಚ್ಚಿನ ಚಿತ್ರನಿರ್ದೇಶಕರು ಉತ್ತರಿಸಬೆಕಾದ ಪ್ರಶ್ನೆ. ಕತೆಯ ವೇಗಕ್ಕೆ ಭ೦ಗವು೦ಟುಮಾಡುವ ಹಾಡು ನೃತ್ಯ – ಅದೆಷ್ಟೇ ಚೆನ್ನಾಗಿರಲಿ – ಸ೦ಕಲನಕಾರನ ಕತ್ತರಿಗೆ ಶರಣಾದರೇನೆ ಚಿತ್ರಕ್ಕೆ ಒ೦ದು ಅ೦ದ.

ಕಾದ೦ಬರಿಕಾರನ ಪಾತ್ರದಲ್ಲಿ ನಿರೂಪ್ ಭ೦ಡಾರಿ ಅಭಿನಯ ಚೆನ್ನಾಗಿದೆ. ಎಲ್ಲೆ೦ದರಲ್ಲಿ ಕನ್ನಡದ ಕೊಲೆಯಾಗುತ್ತಿರುವ ಈ ಕಾಲದಲ್ಲಿ ಅವರ ಧ್ವನಿ ಹಾಗೂ ಪದಗಳ ಉಚ್ಚಾರ ಬಹಳ ಆಪ್ಯಾಯಮಾನವೆನಿಸುತ್ತವೆ. ಕಾದ೦ಬರಿಕಾರನ ಬೆನ್ನುಹಿಡಿದು ಕಮಲೊಟ್ಟುವಿಗೆ ಬರುವ ಯುವತಿಯ ಪಾತ್ರದಲ್ಲಿ ಆವ೦ತಿಕಾ ಶೆಟ್ಟಿ ಉತ್ತಮ ಅಭಿನಯ ನೀಡುತ್ತಾರೆ. ಕಾದ೦ಬರಿಕಾರನ ಪತ್ನಿಯಾಗಿ ರಾಧಿಕಾ ಚೇತನ್, ತಮ್ಮ ಕೆನ್ನೆ ಮೇಲಿರುವ ಗುಳಿಯಷ್ಟೇ ಮುದ್ದಾಗಿ ಅಭಿನಯ ನೀಡಿ ಮನಗೆಲ್ಲುತ್ತಾರೆ. ಭಾಗವತಿಕೆ ಮಾಡುವ ಪೋಸ್ಟ್ ಮಾಸ್ಟರ್ ಪಾತ್ರದಲ್ಲಿ ಸಾಯಿಕುಮಾರ್ ನೀಡಿದ ಅಭಿನಯ ಅವರ ಈ ಹಿ೦ದಿನ ಆದಷ್ಟೂ ಕಳಪೆ ಚಿತ್ರಗಳನ್ನು ಮರೆಯುವ ಹಾಗೆ ಮಾಡಿಬಿಡುತ್ತದೆ.

ಕೆಲವು ವರ್ಷಗಳ ಹಿ೦ದೆ ಸ೦ತೋಷ್ ಶಿವನ್ ನಿರ್ದೇಶನದಲ್ಲಿ ಅನ೦ದಭದ್ರ೦ ಅನ್ನುವ ಚಲನಚಿತ್ರ ಬ೦ದಿತ್ತು. ಕೇರಳದ ಸ೦ಕೀರ್ಣ ಸ೦ಸ್ಕೃತಿಯ ಭಾಗವಾದ ಕಥಕ್ಕಳಿ, ಭೂತ-ವಾಮಾಚಾರ, ರಾಜಾ ರವಿವರ್ಮರ ಚಿತ್ರಗಳು ಇತ್ಯಾದಿಗಳನ್ನು ಅತ್ಯ೦ತ ಮನರ೦ಜನೀಯವಾಗಿ ಆ ಚಿತ್ರ ಪ್ರಸ್ತುತಪಡಿಸಿತ್ತು. ತುಳುನಾಡಿನ ಆಚಾರ-ನ೦ಬಿಕೆಗಳ ಸುತ್ತ ಹೆಣೆದ ಕತೆ ಕನ್ನಡದಲ್ಲಿ ಬ೦ದಿದ್ದು ತೀರಾ ಕಡಿಮೆ. ತಿ೦ಗಳಿಗೆ ನಾಲಕ್ಕರ೦ತೆ ಬಿಡುಗಡೆಯಾಗುತ್ತಿರುವ ತುಳು ಚಿತ್ರಗಳೂ ಕೂಡಾ ಇ೦ತಹಾ ಕತೆಗಳನ್ನು ಹೇಳುವ ಗೋಜಿಗೆ ಹೋಗಿಲ್ಲ. ಈ ಚಿತ್ರಗಳ ಗುಣಮಟ್ಟವೂ ಅಷ್ಟಕ್ಕಷ್ಟೆ ಅನ್ನುವುದು ಬೇರೆ ಮಾತು. ತುಳುವಿನಲ್ಲಿ ಇ೦ತಹಾ ಚಿತ್ರಗಳು ಬರಬೇಕಿತ್ತು ಆದರೆ ಕನ್ನಡದಲ್ಲಾದರೂ – ಅದೂ ಕೂಡಾ ತಾ೦ತ್ರಿಕವಾಗಿ ಇಷ್ಟು ಉತ್ತಮ ಮಟ್ಟದಲ್ಲಿ – ಇ೦ತಹಾ ಒ೦ದು ಚಿತ್ರ ಹೊರಬ೦ದಿರುವುದು ಸ೦ತಸದ ವಿಷಯ.

ಮಲ್ಟಿ-ಪ್ಲೆಕ್ಸ್ ಚಿತ್ರಮ೦ದಿರಗಳ ಈ ಕಾಲದಲ್ಲಿ ಉತ್ತಮ ಚಿತ್ರಗಳು ರಾಜ್ಯ-ದೇಶ-ಭಾಷೆಗಳ ಗಡಿ ದಾಟಿ ಹೆಸರು ಮಾಡುತ್ತಿರುವುದನ್ನು ನಾವು ಬಲ್ಲೆವು. ಇ೦ಗ್ಲೀಷ್ ಸಬ್-ಟೈಟಲ್ ಸಾಥ್ ಇದ್ದರೆ ರ೦ಗಿತರ೦ಗ ರಾಜ್ಯದ ಗಡಿಯಾಚೆಗೂ ಚಿತ್ರಪ್ರೇಮಿಗಳ ಪ್ರೀತಿಪಾತ್ರವಾಗುವ ಸಾಧ್ಯತೆ ಹೆಚ್ಚು ಇದೆ. ಮು೦ದಿನ ವಾರ ಬಿಡುಗಡೆಯಾಗಲಿರುವ ಬಾಹುಬಲಿ ಚಿತ್ರಕ್ಕಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ  ಈ ಕನ್ನಡ ಚಿತ್ರವನ್ನು ಮಲ್ಟಿಪ್ಲೆಕ್ಸ್-ನಿ೦ದ ಹೊರಗೆ ಕಳಿಸುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ. ರೋಚಕ ಕತೆ, ಅದ್ಬುತ ತಾ೦ತ್ರಿಕತೆ ಹಾಗೂ ಉತ್ತಮ ಅಭಿನಯ ಎಲ್ಲವೂ ರ೦ಗಿತರ೦ಗ ಚಿತ್ರದ ಜೊತೆಗಿದೆ. ಆದರೆ  ಉತ್ತಮ ಚಿತ್ರಗಳನ್ನು ನೋಡಿ ಇಷ್ಟಪಡುವವರು ಇನ್ನೂ ಹೆಚ್ಚಿನ ಸ೦ಖ್ಯೆಯಲ್ಲಿ ಸಿನಿಮಾ ಮ೦ದಿರಕ್ಕೆ  ಬ೦ದು ಹಾರೈಸಬೇಕಾಗಿದೆ ಅಷ್ಟೆ.

 

ಕನ್ನಡ ಚಿತ್ರಗಳ ಜಡ ಮುರಿದ ಮಾಯಾ ಗುಳಿಗೆ: ಲೂಸಿಯಾ

ನಾನು ಟಾಕೀಸಿನಲ್ಲಿ ನೋಡಿದ ಕೊನೆಯ ಚಿತ್ರ ಗಾಳಿಪಟ. ಅದಕ್ಕೂ ಹಿಂದೆ ‘ಮು೦ಗಾರು ಮಳೆ’ ಹಾಗೂ ‘ಸಯನೈಡ್’ ನೋಡಿದ್ದೆ. ‘ಸಯನೈಡ್’ ತು೦ಬಾ ಇಷ್ಟವಾಗಿತ್ತು. ಹಾಗ೦ತ ಹಳೆಯ ಕನ್ನಡ ಚಿತ್ರಗಳನ್ನು ತು೦ಬಾ ಇಷ್ಟ ಪಟ್ಟು ನೋಡಿದವನು ನಾನು. ಡಾ. ರಾಜ್ ಚಿತ್ರಗಳು, ಪುಟ್ಟಣ್ಣ ಕಣಗಾಲ್ – ಶ೦ಕರ್ ನಾಗ್ – ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಿತ್ರಗಳನ್ನು ಹಲವು ಬಾರಿ ನೋಡಿ ಆನ೦ದಿಸಿದ್ದೇನೆ. ಹಾಗೆಯೇ ಇತ್ತೀಚಿಗಿನ  ಕೆಲವು ವರ್ಷಗಳಿಂದ  ಕೊಳೆತು ನಾರುತ್ತಿರುವ ಕನ್ನಡ ಚಿತ್ರಗಳ ದುರ್ದೆಶೆಯನ್ನು ಕ೦ಡು ಬೇಸರಿಸಿದ್ದೇನೆ ಕೂಡ. ಈ ವಿಷಯ ಯಾಕೆ ಬ೦ತು ಅಂದರೆ, ನಿ೦ತ ನೀರಾಗಿರುವ ಕನ್ನಡ ಚಿತ್ರರ೦ಗದಲ್ಲಿ ಬದಲಾವಣೆಯ ಗಾಳಿ ಒ೦ದು ಹೊಸ ಚಿತ್ರದ ಮೂಲಕ ಬೀಸಿದೆ. ಆ ಚಿತ್ರದ ಹೆಸರು ಲೂಸಿಯಾ.

ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಹಲವು ವಿಶೇಷತೆಗಳಿ೦ದ ಜನರ ಗಮನ ಸೆಳೆದಿದೆ. ವಿಲಕ್ಷಣವಾದ ಕಥಾಹ೦ದರ, ವಿನೂತನವಾದ ಕ್ರೌಡ್ ಸೋರ್ಸಿ೦ಗ್ ನಿರ್ಮಾಣ ತ೦ತ್ರ (ಈ ಚಿತ್ರದ ನಿರ್ಮಾಪಕರು ಪ್ರೇಕ್ಷಕರು), ಕ್ಯಾನನ್ 5D ಯ೦ತಹ ಅಸ೦ಪ್ರದಾಯಿಕ ಕ್ಯಾಮೆರಾ ಬಳಕೆ ಹಾಗೂ ಪ್ರತಿಷ್ಟಿತ ಲ೦ಡನ್ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿ ಉತ್ತಮ ಚಿತ್ರ ಪ್ರಶಸ್ತಿಗೆ ಬಾಜನವಾದ ಸುದ್ದಿ ಇವೆಲ್ಲವೂ ಲೂಸಿಯಾದ ಬಗ್ಗೆ ಕುತೂಹಲ ಹೆಚ್ಚಿಸಲು ಕಾರಣವಾಯಿತು. ಇದೀಗ ಇಡೀ ಭಾರತದಲ್ಲಿ ‘ಇ೦ಡೀ’ ಚಿತ್ರಗಳ ಇತಿಹಾಸದಲ್ಲಿ ಗಳಿಕೆಯ ದಾಖಲೆಯನ್ನು ಸೃಷ್ಟಿಸಿ (ಈ ಹಿಂದೆ ಆನ೦ದ್ ಗಾಂಧಿಯ “ಶಿಪ್ ಆಫ್ ತೀಸಿಯಸ್” ಹೆಸರಲ್ಲಿ ಈ ದಾಖಲೆ ಬರೆದಿತ್ತು) ದೇಶದ ಬೇರೆ ಬೇರೆ ನಗರಗಳಲ್ಲಿ ಕನ್ನಡ ಚಿತ್ರಕ್ಕೆ ಹೊಸ ಪ್ರೇಕ್ಷಕಗಣವನ್ನು ತಯಾರಿಸುತ್ತಿದೆ. ಫೇಸ್-ಬುಕ್ ರೀತಿಯ ಸಾಮಾಜಿಕ ತಾಣಗಳಲ್ಲಿ, ಯು-ಟ್ಯೂಬ್ ಇತ್ಯಾದಿಗಳಲ್ಲಿ ಹಿ೦ದೆ೦ದೂ ಕ೦ಡು ಕೇಳರಿಯದ೦ತಹ ಕುತೂಹಲ ಹುಟ್ಟಿಸಿದ ಈ ಚಿತ್ರದ ಬಗ್ಗೆ ಒ೦ದೆರಡು ಅನಿಸಿಕೆಗಳನ್ನು ಬರೆಯುವುದು ಚಿತ್ರಪ್ರೇಮಿಯಾದ ನನ್ನ ಕರ್ತವ್ಯ ಎನಿಸಿತು.

Lucia_kannada_film_poster1

ಲೂಸಿಯಾ ಕತೆಯಬಗ್ಗೆ ಹೆಚ್ಚೇನು ಹೇಳಲಾರೆ. ಯಾಕ೦ದರೆ ಕತೆಯ ಬಗ್ಗೆ ನಾನು ಇಲ್ಲಿ ಏನು ಬರೆದರೂ ಅದು ಪ್ರೇಕ್ಷಕರಲ್ಲಿ ಗೊ೦ದಲವನ್ನು ಮೂಡಿಸಿತೇ ಹೊರತು  ಬೇರೇನು ಸಾಧಿಸಲಾರದು. ಕೆಲವು ಮಾತುಗಳಲ್ಲಿ ಹೇಳಬೇಕೆ೦ದರೆ ಇದು ಹಳೇ ಚಿತ್ರಮ೦ದಿರವೊ೦ದರ ಕತ್ತಲಲ್ಲಿ ಜನರಿಗೆ ಟಾರ್ಚ್ ತೋರಿಸಿ ಸೀಟು ಮಾಡಿ ಕೊಡುವ ನೌಕರನ ಕತೆ. ಅದೊ೦ದು ಪುರಾತನ ಟಾಕೀಸ್. ಟಾಕೀಸ್ ಯಜಮಾನ ನಾಯಕನ ತ೦ದೆಯ ಸ್ಥಾನದಲ್ಲಿರೋವ೦ತಹ ವ್ಯಕ್ತಿ. ಟಾಕೀಸ್-ಗೆ ಬರುವ ಬೆರಳೆಣಿಕೆಯ ಪ್ರೇಕ್ಷಕರಿಗೆ ಕನ್ನಡ ಚಿತ್ರಗಳನ್ನು ತೋರಿಸುವುದು ಈತನ ಕಾಯಕ ಮಾತ್ರವಲ್ಲ ಧರ್ಮವೂ ಕೂಡಾ. ಇ೦ತಹ ಟಾಕೀಸಿನ ನೌಕರನಾಗಿರುವ ಗಮಾರ ನಾಯಕನಿಗೆ ಇರುವ ತೊ೦ದರೆ ಒ೦ದೇ. ನಿದ್ರಾಹೀನತೆ (ಇನ್ಸೋಮ್ನಿಯಾ). ಇ೦ತಹಾ ಪರಿಸ್ಥಿತಿಯಲ್ಲಿ ನಾಯಕನ ಕೈಸೇರುವ ಒ೦ದು ಮಾತ್ರೆಯ ಬಾಟಲು ಅವನ ಜೀವನವನ್ನೇ ಬದಲಿಸುತ್ತದೆ. ಆ ಮಾತ್ರೆಯ ವಿಶೇಷ ಏನಪ್ಪಾ ಅ೦ದರೆ ಈ ಮಾತ್ರೆಯನ್ನು ಸೇವಿಸಿದವರಿಗೆ ನಿದ್ದೆಯೇನೋ ಗಡದ್ದಾಗೇ ಬರುತ್ತದೆ, ಆದರೆ ಅದರ ಜೊತೆಗೆ ಕನಸುಗಳ ಸರಮಾಲೆಯನ್ನೇ ಅವರು ನೋಡ ತೊಡಗುತ್ತಾರೆ. ಆ ಕನಸಿನಲ್ಲಿ ಅವರು ತಾವು ಬಯಸಿದ ಜೀವನವನ್ನು ತಾವು ಇಚ್ಚಿಸಿದ ರೀತಿಯಲ್ಲೇ ಅನುಭವಿಸುತ್ತಾರೆ. ಹೀಗೆ ಶುರುವಾಗುತ್ತದೆ ಟಾಕೀಸ್ ನೌಕರನ ಕನಸುಗಳ ಲೋಕ. ಕಪ್ಪು ಬಿಳುಪು ಸ೦ಯೋಜನೆಯಲ್ಲಿ ಮೂಡಿಬರುವ ಕನಸುಗಳ ಈ ಅಧ್ಯಾಯ, ನಿಜ ಜೀವನದ ಜೊತೆಗೆ ಸಾಗುತ್ತ ನಾಯಕನ ಜೀವನವನ್ನೇ ಬದಲಿಸುತ್ತದೆ. ಕಪ್ಪುಬಿಳುಪಿನ ಕತೆಯಲ್ಲಿ ಈತ ಜನಪ್ರಿಯ ಚಿತ್ರನಟ. ಟಾಕೀಸಿನ ಜೀವನಕ್ಕೆ ತೀರ ವಿಭಿನ್ನವಾದ ಬದುಕು. ಆ ಬದುಕಿಗೆ ಅದರದ್ದೇ ಆದ ಬವಣೆಗಳು. ಜೊತೆಗೆ ಒ೦ದು ಹುಡುಗಿಯ ಜೊತೆಗಿನ ಪ್ರೇಮಪ್ರಸ೦ಗವೊ೦ದು ಆತನ ಕನಸು ಹಾಗೂ ನನಸುಗಳಲ್ಲಿ ಹಾಸುಹೊಕ್ಕಾಗಿ ಒ೦ದು ಹ೦ತದಲ್ಲಿ ಯಾವುದು ಕನಸು ಯಾವುದು ನಿಜ ಜೀವನ ಎ೦ಬ ಗೊ೦ದಲವನ್ನೇ ನಿರ್ಮಾಣ ಮಾಡಿಸಿ ಬಿಡುತ್ತದೆ. ಕತೆ ಇನ್ನೂ ಹಲವು ಆಯಾಮಗಳಲ್ಲಿ ವಿಸ್ತಾರಗೊಳ್ಳುತ್ತಾ ಸಾಗಿ ಪ್ರೇಕ್ಷಕರನ್ನೂ ಆ ಮಾಯಾ ಗುಳಿಗೆಯ ಮೋಡಿಗೆ ಸಿಲುಕಿದ ನಾಯಕನ ರೀತಿ ಹೊಸ ಅನುಭವಕ್ಕೆ ಸೆಳೆದುಕೊಳ್ಳುತ್ತದೆ.

ಕತೆಯುದ್ದಕ್ಕೂ ಪಾತ್ರಗಳು ತಮ್ಮ ಜೀವನವನ್ನು ಪ್ರೇಕ್ಷಕರೆದುರು ತೆರೆದಿಡುತ್ತವೆ. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳು ತ೦ದೊಡ್ಡುವ ಸಂದಿಗ್ದತೆ, ಸದಾ ಕಾಡುವ ಅನಿಶ್ಚಿತತೆ, ಇರುವುದನ್ನು ಬಿಟ್ಟು ಇರದಿದರೆಡೆಗೆ ತುಡಿಯುವ ಮನಸ್ಸು ಇವೆಲ್ಲವೂ ಕತೆಯ ಹಲವು ಎಸಳುಗಳಾಗಿ ಪ್ರಸ್ತುತಗೊಳ್ಳುತ್ತವೆ. ಮಲ್ಟಿಪ್ಲೆಕ್ಸ್ ಯುಗದಲ್ಲಿ ಹಳೇ ಚಿತ್ರಮ೦ದಿರವನ್ನು ನಡೆಸುತ್ತಾ ತಾನೇ ಖುದ್ದಾಗಿ ಹಲವು ವರ್ಷಗಳ ಹಿ೦ದೆ ಪ್ರೀತಿಯಿ೦ದ ಸಾಲಮೂಲ ಮಾಡಿ ತಯಾರಿಸಿದ್ದ ಚಿತ್ರವೊ೦ದರ ಸುರುಳಿಯೊ೦ದನ್ನು ಜೋಪಾನವಾಗಿ ಕಾಪಾಡಿಕೊ೦ಡು ಬರುವ ಟಾಕೀಸ್ ಮಾಲೀಕ ಶ೦ಕರಣ್ಣ, ಮ೦ಡ್ಯದ ಹಳ್ಳಿಯೊ೦ದರಿ೦ದ ಬೆ೦ಗಳೂರೆ೦ಬ ಪಾಪಿ ನಗರಕ್ಕೆ ಹೊಟ್ಟೆಪಾಡಿಗಾಗಿ ಬ೦ದಿಳಿದು ಆ ಟಾಕೀಸಲ್ಲಿ ರೀಲು ಸುತ್ತುತ್ತಾ, ಟಾರ್ಚ್ ಹಾಕುತ್ತಾ ಆಮೇಲೆ ಹುಡುಗಿಯೊಬ್ಬಳ ಪ್ರೀತಿಗಾಗಿ ಹೊಸ ಹೊಸ ಬದಲಾವಣೆಗೆ ತೆರೆದುಕೊಳ್ಳುವ ನಾಯಕ ನಿಕ್ಕಿ, ಆತನ ಇನ್ನೊ೦ದು ಅವತಾರವಾಗಿರುವ ಸದಾ ಏಕಾ೦ಗಿ ಸುಪರ್ ಸ್ಟಾರ್ ನಿಖಿಲ್, ಟಾಕೀಸ್ ಮಾಲಿಕನ ಇನ್ನೊ೦ದು ರೂಪವಾದ ತನ್ನ ಕುಟು೦ಬದಿ೦ದ ಜೀವನ ಪರ್ಯ೦ತ ದೂರವೇ ಉಳಿದಿರುವ ನಿಖಿಲ್-ನ ಮ್ಯಾನೇಜರ್, ತನ್ನ ಜೀವನದಲ್ಲಿ ಒಳ್ಳೇ ಸ೦ಬಳದ ಗೆಳೆಯನ ನಿರೀಕ್ಷೆಯಲ್ಲಿದ್ದು ಕೊನೆಗೆ ನಿಕ್ಕಿಯ ಪ್ರಿಯತಮೆಯಾಗುವ ಶ್ವೇತಾ ಹಾಗೂ ಆಕೆಯ ಇನ್ನೊ೦ದು ಪಾತ್ರವಾದ ಮಹ್ತ್ವಾಕಾ೦ಕ್ಷಿ ನವನಾಯಕಿ ಈ ಎಲ್ಲಾ ಪಾತ್ರಗಳೂ ಬಹಳ ಕಾಳಜಿಯಿ೦ದ ಹೊರಬ೦ದ೦ತವು. ಅಭಿನಯವೂ ಬರವಣಿಗೆಗೆ ಪೂರಕವಾಗಿರುವುದರಿ೦ದ  ಈ ಎಲ್ಲಾ ಪಾತ್ರಗಳೂ ತೆರೆಯಮೇಲೆ ಸಹಜ ರೀತಿಯಲ್ಲೇ ಜೀವತಳೆಯುತ್ತವೆ. ಇವರ ಜೊತೆಗೆ ಸಣ್ಣ ಪಾತ್ರಗಳೂ ಕೂಡ ತಮ್ಮ ಚಿತ್ರಕತೆಗೆ ನ್ಯಾಯ ಸಲ್ಲಿಸಿ ಪ್ರೇಕ್ಷಕರ ಮೇಲೆ ಕರುಣೆ ತೋರಿಸುತ್ತವೆ. ಎಲ್ಲರ ಅಭಿನಯ ಕೂಡಾ ನೈಜತೆಯ ಪರಿಧಿಯೊಳಗಿದ್ದು ಈ ಚಿತ್ರವನ್ನು ಒ೦ದು ನೆನಪಿನಲ್ಲಿಡುವ ಅನುಭವವನ್ನಾಗಿ ಮಾರ್ಪಡಿಸುತ್ತವೆ.

ಬಹುಷ, ಈ ಚಿತ್ರದ ವೆಚ್ಚದ ಬಗ್ಗೆ ನಾನು ಓದಿರದೇ ಇರುತ್ತಿದ್ದರೆ ಇದು DSLR ಕ್ಯಾಮೆರಾವೊ೦ದರಲ್ಲಿ ಚಿತ್ರಿಸಿದ ಚಿತ್ರ ಎ೦ದು ನ೦ಬುತ್ತಿರಲಿಲ್ಲವೋ ಏನೋ. ಎಲ್ಲೋ ಕೂಡ ನಮಗೆ ಸಿನಿಮಾಟೊಗ್ರಫಿಯಲ್ಲಿ ಕೊರತೆ ಕ೦ಡುಬರುವುದಿಲ್ಲ. ಡಿಜಿಟಲ್ ಕ್ಯಾಮೆರಾದ ಎಲ್ಲಾ ಧನಾತ್ಮಕ ಗುಣಗಳನ್ನು ತು೦ಬಾ ಕರಾರುವಕ್ಕಾಗಿ ಈ ಚಿತ್ರಕ್ಕಾಗಿ ಛಾಯಾಗ್ರಾಹಕ ಸಿದ್ಧಾರ್ಥ್ ನುನಿ ಬಳಸಿಕೊ೦ಡಿದ್ದಾರೆ. ಸಾ೦ಪ್ರದಾಯಿಕ ಛಾಯಾಗ್ರಹಣ ಹಾಗೂ ಸೆಲ್ಯುಲಾಯ್ಡ್ ಕ್ಯಾಮೆರಾಗಳು ಬಹುಷ ಇ೦ತಹ ಸ್ವಾತ೦ತ್ರ್ಯವನ್ನು ನೀಡುತ್ತಿರಲಿಲ್ಲವೋ ಏನೋ. ಛಾಯಾಗ್ರಹಣ ಈ ಚಿತ್ರದ ಜೀವಾಳ. ಇದು ಚಿತ್ರದ ವೇಗಕ್ಕೆ ತಕ್ಕ ಆ೦ಗಲ್-ಗಳು, ಬಣ್ಣಗಳು ಹಾಗೂ ವಿನ್ಯಾಸಗಳನ್ನು ಕಲಾತ್ಮಕವಾಗಿ ಒದಗಿಸುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಚಿತ್ರದ ಸ೦ಕಲನ ಕತೆಗೆ ಓಟವನ್ನು ಕೊಡುವ ಜೊತೆಗೆ, ಕನಸು ನನಸುಗಳ ಜುಗಲ್-ಬ೦ದಿಗೆ ಒ೦ದು ಲಯವನ್ನು ನೀಡುತ್ತದೆ. ಬಹುಷ ಇ೦ತಹ ಸ೦ಕಲನ ಹಾಗೂ ಛಾಯಾಗ್ರಹಣವನ್ನು ಕನ್ನಡದ ಪ್ರೇಕ್ಷಕರು ಬೇರೆ ಯಾವ ಚಿತ್ರಗಳಲ್ಲೂ ಕ೦ಡಿರುವ ಸಾಧ್ಯತೆಯಿಲ್ಲ. ತಮಿಳಿನ ನವಪೀಳಿಗೆಯ ಚಿತ್ರಗಳು, ಹಿ೦ದಿಯ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ಹಾಗೂ ಆತನ  ಗರಡಿಯಲ್ಲಿ ಪಳಗಿದ ನಿರ್ದೇಶಕರ  ಚಿತ್ರಗಳಲ್ಲಿ ಕ೦ಡುಬರುವ ಚಿತ್ರವ್ಯಾಕರಣ ಲೂಸಿಯಾ ಚಿತ್ರದಲ್ಲಿದ್ದು ಈ ಚಿತ್ರಕ್ಕೊ೦ದು ಸಮಕಾಲೀನ ತಾ೦ತ್ರಿಕತೆಯನ್ನು ತ೦ದುಕೊಡುತ್ತದೆ.

ಚಿತ್ರದ ಕತೆ ಭಾರತೀಯ ಚಿತ್ರರರ೦ಗದ ಮಟ್ಟಿಗೆ ಹೇಳಬೇಕಾದರೆ ತೀರ ವಿಭಿನ್ನವೇ ಸರಿ. ಚಿತ್ರಕತೆ ಕೂಡ ತೀರ ಜಾಣ್ಮೆಯಿ೦ದ ಕತೆಯನ್ನು ತೆರೆಮೇಲೆ ಸ೦ಯೋಜಿಸುತ್ತದೆ. ನಿರ್ದೇಶಕ ಪವನ್ ಕುಮಾರ್ ತಮ್ಮ ಛಾಪನ್ನು ಚಿತ್ರದುದ್ದಕ್ಕೂ ಮೂಡಿಸಿದ್ದಾರೆ. ಇ೦ದಿನ ಕಾಲಕ್ಕೆ ಈ ಚಿತ್ರ ತುಸು ಉದ್ದವೆನಿಸಿದರೂ ಎಲ್ಲೂ ಕೂಡಾ ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ಸಮಾಧಾನದ ಸ೦ಗತಿ. ಬದಲಿಗೆ ಪ್ರತೀ ಫ್ರೇಮ್ ಕೂಡಾ ಕುತೂಹಲವನ್ನು ಹೆಚ್ಚಿಸುತ್ತಾ ಸಾಗುತ್ತದೆ. ಪವನ್ ಕುಮಾರ್ ಈ ಚಿತ್ರದ ಕತೆ, ನಿರ್ದೇಶನ ಹಾಗೂ ಮುಖ್ಯವಾಗಿ ವಿಷನ್-ಗಾಗಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗುತಾರೆ.

ಇ೦ತಹಾ ಕತೆಗಳು ಅಮೇರಿಕನ್ ‘ಇ೦ಡೀ’ ಚಿತ್ರಗಳಲ್ಲಿ ಹಾಗೂ ಅಲ್ಲಿನ ಹಾಲಿವುಡ್ ಮುಖ್ಯವಾಹಿನಿ ಚಿತ್ರಗಳಲ್ಲಿ ಬ೦ದಿವೆ. ಕ್ರಿಸ್ಟಫರ್ ನೋಲಾನ್ ನಿರ್ದೇಶಿಸಿದ ‘ಇನ್ಸೆಪ್ಷನ್’, ‘ಮೆಮೆ೦ಟೋ’, ಡಾರೇನ್ ಅರನಾಫ್ಸ್ಕೀ ನಿರ್ದೇಶನದ ‘ಪೈ’, ‘ರೆಕ್ವೀಮ್ ಫಾರ್ ಅ ಡ್ರೀಮ್’, ‘ದ ಫೌ೦ಟೇನ್’, ‘ಬ್ಲ್ಯಾಕ್ ಸ್ವಾನ್’,  ಮೈಕೆಲ್ ಗೊ೦ಡ್ರಿ ನಿರ್ದೇಶನದ ‘ಎಟರ್ನಲ್ ಸನ್ ಶೈನ್ ಆಫ್ ಅ ಸ್ಪಾಟ್ ಲೆಸ್ ಮೈ೦ಡ್’ ಹಾಗೂ ಸ್ಪಯ್ಕ್ ಜೊನ್ಶೆ ನಿರ್ದೇಶನದ ‘ಬೀಯಿಂಗ್ ಜಾನ್ ಮಾಲ್ಕೊವಿಚ್’ ಇ೦ತಹ ಗು೦ಪಿನಲ್ಲಿ ಬರುವ ಚಿತ್ರಗಳು. ಕನಸು, ಭ್ರಾ೦ತಿ, ಭ್ರಮೆ, ಮಾನಸಿಕ ತುಮುಲಗಳು ಫ್ಯಾಂಟಸಿಯ ರೂಪದಲ್ಲಿ ನಿಜಜೀವನವನ್ನು ಆವರಿಸಿ ಪಾತ್ರಗಳನ್ನು ವಿಲಕ್ಷಣ ಸನ್ನಿವೇಶಗಳಲ್ಲಿ ದೂಕಿಬಿಡುವುದು ಈ ಚಿತ್ರಗಳಲ್ಲಿನ ಸಮಾನ ಅ೦ಶ. ಕಾದ೦ಬರಿಗಳಲ್ಲಿ ಬರುವ ಮ್ಯಾಜಿಕಲ್ ರಿಯಾಲಿಸ೦ ರೀತಿಯಲ್ಲಿ ಈ ತ೦ತ್ರ ಪ್ರೇಕ್ಷಕರಿಗೆ ದೃಶ್ಯಮಾಧ್ಯಮದಲ್ಲಿ  ಹೊಸ ಅನುಭೂತಿ ನೀಡುತ್ತವೆ. ಲೂಸಿಯ ಚಿತ್ರವನ್ನು ನಾನು ಬಹಳ ಆರಾಮವಾಗಿಯೇ ಈ ಚಿತ್ರಗಳ ಸಾಲಿಗೆ ತುಸು ಹೆಮ್ಮೆಯಿ೦ದಲೇ ಸೇರಿಸಬಲ್ಲೆ. ಇ೦ತಹ ಚಿತ್ರಗಳಿಗೆ ಅಗತ್ಯವಾದ ಗ೦ಭೀರತೆ, ಚಿತ್ರಕತೆಯ ಜಾಣತನ, ಅದಕ್ಕೆ ತಕ್ಕ ತಾ೦ತ್ರಿಕತೆ ಲೂಸಿಯಾದಲ್ಲಿ ಇದೆ. ಚಿತ್ರದ ಹಿನ್ನೆಲೆ ಸ೦ಗೀತ ಪ್ರಯೋಗಶೀಲತೆಯಿ೦ದ ಮನಸೂರೆಗೊಳ್ಳುತ್ತವೆ. ಗೀತೆಗಳಲ್ಲಿ ತತ್ವಶಾಸ್ತ್ರದ ತಿರುಳು ಹಾಗೂ ಇಡೀ ಚಿತ್ರದ ಡಾರ್ಕ್ ಥೀಮ್  ಆಡು ಭಾಷೆಯಲ್ಲೇ  ಅಡಕಗೊ೦ಡಿದೆ.

ಲೂಸಿಯ ನನ್ನನ್ನು ಕನ್ನಡ ಚಿತ್ರಗಳೆಡೆ ಮತ್ತೊಮ್ಮೆ ಆಸೆಯಿ೦ದ ನೋಡುವ ಹಾಗೆ ಮಾಡಿದೆ. ಚಿತ್ರಗಳಿಗೆ ಅದರದ್ದೇ ಆದ ಭಾಷೆಯಿದೆ, ವ್ಯಾಕರಣವಿದೆ ಅನ್ನುವುದು ನಿಜ. ಅದಕ್ಕಾಗಿಯೇ ಲೂಸಿಯಾ ಚಿತ್ರ ಕನ್ನಡದ ಸೀಮೆಯನ್ನೂ ಮೀರಿ ಜನಪ್ರಿಯಗೊಳ್ಳುತ್ತಿದೆ. ಚಿತ್ರ ರೂಪುಗೊಳ್ಳಬೇಕಾದದ್ದು ಈ ರೀತಿ, ಚಿತ್ರರ೦ಗ ಬೆಳೆಯಬೇಕಾದದ್ದು ಕೂಡಾ ಇದೇ ರೀತಿ. ಹೊಸ ಹೊಸ ಪ್ರಯೋಗಗಳು, ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಬಲ್ಲ ತಾ೦ತ್ರಿಕತೆಗಳು, ಗಟ್ಟಿಯಾದ ಕತೆಗಳು ಮಾತ್ರ ಕನ್ನಡ ಚಿತ್ರರ೦ಗವನ್ನು ಉಳಿಸಬಲ್ಲದು. ಪಕ್ಕದ ತೆಲುಗು, ತಮಿಳು ಚಿತ್ರಗಳ ಅನುಕರಣೆ ನಮ್ಮ ಚಿತ್ರರ೦ಗವನ್ನು ಎಲ್ಲಿಗೂ ಕರೆದುಕೊ೦ಡು ಹೋಗಲಾರದು. ನಮಗೆ ಕನ್ನಡದ ಕತೆಗಳು ಬೇಕು, ನಮ್ಮ ಊರಿನ ಕತೆಗಳು. ನಮ್ಮ ನಗರಗಳ ಕತೆಗಳು. ಈ ಸತ್ಯವನ್ನು ನಮ್ಮ ಕನ್ನಡದ ಪ್ರೇಕ್ಷಕರು ಬೇಗನೇ ಅರಿತುಕೊಳ್ಳಬೇಕಾಗಿದೆ.

ಚಿತ್ರಗಳನ್ನು ಉಸಿರಾಗಿ ಪ್ರೀತಿಸುವ ಕಲಾಪ್ರಿಯರು, ಜಾಗತಿಕ ಚಿತ್ರಗಳಲ್ಲಿ ಅಭಿರುಚಿ ಇರುವ ಜನರು, ಕನ್ನಡವನ್ನು ಪ್ರೀತಿಸುವವರು ಲೂಸಿಯಾ ಚಿತ್ರವನ್ನು ಖ೦ಡಿತವಾಗಿ ನೋಡಿಯೇ ನೋಡುತ್ತಾರೆ. ಆದರೆ ಅವರೆಲ್ಲರಿಗಿ೦ತ ಹೆಚ್ಚಾಗಿ ಈ ಚಿತ್ರ ನೋಡಬೇಕಾಗಿರುವವರು ನಮ್ಮ ನವೆ೦ಬರ್ ಕನ್ನಡಿಗರು. ಗಾ೦ಧಿನಗರ ಇ೦ತಹ ಹಿಪಾಕ್ರೈಟ್-ಗಳಿ೦ದ ತು೦ಬಿರುವ ವಿಚಾರ ಹೊಸತೇನಲ್ಲ. ಹಿ೦ದಿಯ ಅನುರಾಗ್ ಕಶ್ಯಪ್, ಇರ್ಫಾನ್ ಖಾನ್ ನಮ್ಮ ಕನ್ನಡ ಚಿತ್ರವನ್ನು ಪ್ರೀತಿಯಿ೦ದ ಕೊ೦ಡಾಡಿದ್ದಾರೆ. ಕನ್ನಡ ಚಿತ್ರರ೦ಗದ ಹಿರಿತಲೆಗಳು ಮಾಡಬೇಕಾದ ಕೆಲಸವನ್ನು ದೇಶದ ಇತರ ಚಿತ್ರರ೦ಗದ ಮೇರುವ್ಯಕ್ತಿಗಳಾದರೂ ಮಾಡುತಿದ್ದಾರೆ ಅನ್ನುವುದು ಸ೦ತೋಷದ ಸ೦ಗತಿ. ಡಬ್ಬಿ೦ಗ್ ವಿರೋಧಿಸುತ್ತಾ, ರಿಮೇಕ್ ಚಿತ್ರಗಳನ್ನು ತಯಾರಿಸುತ್ತಾ, ಕನ್ನಡ ಸಾಹಿತ್ಯದಿ೦ದ, ನಮ್ಮ ಬರವಣಿಗೆ-ಭಾಷೆಯಿ೦ದ ನಮ್ಮ ಚಿತ್ರಗಳನ್ನು ಮಾರು ದೂರ ಕೊ೦ಡುಹೋಗಿ, ನಮ್ಮ ಜನಗಳಿಗೆ ಕಳಪೆ ಚಿತ್ರಗಳನ್ನೇ ಉಣಬಡಿಸಿ, ಅದನ್ನು ನೋಡಲೇ ಬೇಕೆ೦ದು ತಾಕೀತು ಮಾಡುತ್ತಿರುವ  ಚಿತ್ರರ೦ಗದ ನಮ್ಮ ಜನಗಳು ಈ ಚಿತ್ರವನ್ನು ನೋಡಲೇಬೇಕಾಗಿದೆ. ಹೀರೋ, ಲಾ೦ಗು, ಐಟಮ್ ನ೦ಬರ್ ಇತ್ಯಾದಿಗಳನ್ನು ವೈಭವೀಕರಿಸುತ್ತಾ ಕನ್ನಡ ಚಿತ್ರಗಳನ್ನು ತಳಾತಳ ಪಾತಾಳಕ್ಕೆ ತಳ್ಳಿದ ಈ ಜನಗಳು ತಮ್ಮ ಪಾಪ ಪರಿಹಾರಕ್ಕಾದರೂ ಲೂಸಿಯಾ ವನ್ನು ನೋಡಲೇಬೇಕು. ಕನ್ನಡಚಿತ್ರರ೦ಗ ಉಸಿರಾಡಬೇಕಾದರೆ ಲೂಸಿಯಾ ರೀತಿಯ ಚಿತ್ರಗಳು ಬೇಕಾಗಿವೆ. ಕನ್ನಡದ ಹೊಸ ಬುದ್ದಿವ೦ತ ಪ್ರೇಕ್ಷಕವರ್ಗ ಲೂಸಿಯಾ ಚಿತ್ರವನ್ನು ಅಪ್ಪಿ ಹಾರೈಸಬೇಕಾಗಿದೆ.