ಮರೆಯಾದ ಗೆಳತಿ

ಇಲ್ಲೇ ಇದೇ ಕೋಣೆಯ ಮಂಚದ ಮೇಲೆ
ನನ್ನ ಕಣ್ಣೀರಿಂದ ತೋಯ್ದ ದಿಂಬಿನಲ್ಲಿ
ತಲೆಯಿಟ್ಟು ಮಲಗಿದ್ದಳು ಆಕೆ,
ಕೆಲ ದಿನಗಳ ಹಿಂದೆ.

ಇಂದು ಇಲ್ಲೆಲ್ಲೂ ಕಾಣಿಸುತ್ತಿಲ್ಲ.
ಆಕೆಯ ಸಾಂತ್ವನದ ನುಡಿಗಳಿಲ್ಲ,
ಗೆಜ್ಜೆಯ ಸದ್ದೂ ಇಲ್ಲ.
ಕೋಣೆಯೊಳಗೆ ನೀರವತೆಯ ತುಂಬಿ
ನನ್ನಿಂದ ದೂರವಾಗಿದ್ದಾಳೆ
ನನ್ನ ಜೀವದ ಗೆಳತಿ.
ನನ್ನ ಮೇಲೆ ಮುನಿಸಿಕೊಂಡಿರಬೇಕು,
ಬಹಳ ನೊಂದಿರಬೇಕು ಅವಳು.

ಜನ್ಮ ಜನ್ಮಾಂತರದ ನಂಟು ನಮ್ಮದು,
ಒಂದು ಆತ್ಮವ ಇಬ್ಬರು ಹಂಚಿಕೊಂಡಂತೆ.
ಯಾವತ್ತೂ ಬಿಟ್ಟುಹೋದವಳಲ್ಲ,
ಯಾಕೆ ಮಾಡಿದಳು ಹೀಗೆ ಇಂದು?

ನನಗೆ ಇಂದಿಗೂ ನೆನಪಿದೆ
ಚಂದ್ರ ತೀರಿದ ಗ್ರಹಣದ ರಾತ್ರಿ.
ಹೊಸ್ತಿಲಲ್ಲಿ ಕುಳಿತು ಬಹಳ ಅತ್ತಿದ್ದೆ
ಆ ಖೂಳ ಇರುಳಿಗೆ ಹೆದರಿ.
ಬಿಗಿದಪ್ಪಿ ಧೈರ್ಯ ತುಂಬದೇ ಹೋಗಿದ್ದಲ್ಲಿ ಅವಳು,
ಹುಟ್ಟಿ ಬರುತ್ತಿದ್ದನೇ ಮರುದಿನ ಸೂರ್ಯ?

ಕತ್ತಲ ರಕ್ಕಸರು ಕನಸಲ್ಲಿ ಕಾಡಿ ನಾ ಎಚ್ಚೆತ್ತಾಗ
ಅವಳ ಕೈಬೆರಳು ಹಿಡಿದು ಮತ್ತೆ ನಿದ್ದೆಗೆ ಜಾರಿದ್ದೆ.
ನನ್ನ ಕವನಗಳಿಗೆ ನಾನೇ ಬೆಂಕಿಯಿಟ್ಟು ಅಳುತ್ತಿದ್ದಂದು
ಹೆಗಲ ಮೇಲೆ ಕೈಹಾಕಿ, ಹಣೆಗೆ ಮುತ್ತನಿಟ್ಟು,
ಪ್ರೀತಿಯ ಮಾತನಾಡಿದ್ದಳು ನನ್ನ ಗೆಳತಿ.

ಮೊಗಸಾಲೆಗೆ ನನ್ನ ಕಾಣಲು ಗೆಳೆಯರು ಬಂದಾಗ
ಕೋಣೆಯಿಂದ ಮಾಯವಾಗಿ ಬಿಡುತ್ತಿದ್ದಳು ಆಕೆ
ಅವರು ಯಾರೂ ಆಕೆಯ ಕಂಡಿದ್ದಿಲ್ಲ,
ನಾನೂ ಆಕೆಯ ಬಗ್ಗೆ ಅವರಲ್ಲಿ ಮಾತಾಡಿದ್ದಿಲ್ಲ.
ನನ್ನ ಕೋಣೆಯ ತುಂಬಾ ಆವರಿಸಿದ್ದ ಆಕೆಯ
ಹೆಜ್ಜೆ ಗುರುತುಗಳನ್ನು ಅವರು ನೋಡಿರಬಹುದೇ?

ನನ್ನ ಕಚೇರಿ ಕೆಲಸ ಕಡತಗಳಲ್ಲಿ ನಾ ಮುಳುಗಿ ಹೋದಾಗ,
ಬಜಾರು ಹಾದಿ ಬಸ್ಸಿನಲ್ಲಿ ಕಳೆದು ಹೋದಾಗ,
ಕೋಣೆಯಲ್ಲಿ ನನ್ನ ಮಂಚದ ಬದಿಯಲ್ಲಿ ಕುಳಿತು
ನನ್ನ ಬರವಿಗೆ ಕಾಯುತ್ತಿದ್ದ ಆಕೆ ಸದಾ ಕಾಡುತ್ತಿದ್ದಳು.

ಜನಜಂಗುಳಿಯ ನಡುವೆ ಕರಗಿ ಹೋದಾಗ
ಕಾಫಿ ಮಾತು ಊಟದ ಜೊತೆ ದಿನ ಕಂತಿದಾಗ
ಆಕೆಯ ಇರುವಿಕೆಯ ಅನುಭೂತಿ
ಮನದ ತುಂಬೆಲ್ಲಾ ಮನೆಮಾಡುತ್ತಿತ್ತು.

ಹೊಸ ಜನಗಳು ಬಂದಾಗ, ಹೊಸ ಪಯಣ ಹೊರಟಾಗ
ಅವಳಿಂದ ದೂರವಾಗಿದ್ದೆ ನಿಜ; ಅರೆ ಮನಸಿನಿಂದ ಬಹುಷ.
ಬಂದ ಜನ ಮರೆಯಾದಾಗ ಮತ್ತೆ ಬರುತ್ತಿದ್ದೆ.
ಇಲ್ಲ! ಆಕೆಯೇ ಬರುತಿದ್ದಳು ನನ್ನ ಬಳಿ; ತಪ್ಪದೇ.
ಮರೆತು ಸಾಗಿದ ಜನಗಳ, ಮುರಿದು ಹೋದ ಕನಸುಗಳ,
ನಿರ್ವಾತ ಕ್ಷಣಗಳ ಬದಲಿಗೋ ಎಂಬಂತೆ.

ಕೋಣೆಯೊಳಗಿಂದ ಎಲ್ಲಿ ಹೋದಳವಳು?
ಪರದೆಗಳ ನಡುವೆ ಬಂಧಿಯಾದ
ಕತ್ತಲೊಳಗೆ ಕರಗಿ ಹೋದಳೇ?
ಶಿಥಿಲಗೊಂಡ ಮರದ ಕಪಾಟಿನ
ಹಿಂದೆ ಅಡಗಿ ಕುಳಿತಳೇ?
ನಡೆಯದ ಗೋಡೆಗಡಿಯಾರದ
ನಿಂತ ನಿಮಿಷದೊಳಗೆ ಲೀನವಾದಳೇ?

ಕೆನ್ನೆ ಮೇಲೆ ಜಾರಿದ ಕಂಬನಿ ಒರೆಸಿ
ಪೇಟೆಯಲ್ಲಿ ನಡೆದು ಹೋಗುತಿದ್ದಂದು
ನಮ್ಮ ಬಗ್ಗೆ ಒಬ್ಬ ದಾರಿಹೋಕ  ಮಾತನಾಡುತಿದ್ದ.
ಅದೋ ನೋಡು ಕವಿ ಹೋಗ್ತಾ ಇದ್ದಾನೆ.
ಆತನ ಜೀವದ ಗೆಳತಿ ಬಗ್ಗೆ
ಗೊತ್ತಾ ನಿಮಗೆ?
ಆಕೆಯ ಹೆಸರು ‘ಏಕಾಂಗಿತನ’ ಅಲ್ಲವೇ?

ನದಿ

ಮಳೆಯಾಗಿ ಸುರಿಸುರಿದು
ಝರಿಯಾಗಿ ಹರಿಹರಿದು
ತೊರೆಯಾಗಿ ಸರಿಯುತಲಿ
ಗಿರಿಯೇರಿ ಇಳಿಯುತಲಿ
ನಾನೊಂದು ನದಿ ಮಾತ್ರ
ಕಡಲ ಎಡೆಗೆ ಈ ಪಯಣ

ನಿನ್ನ ಸನಿಹವ ಬಯಸಿ
ಕಾದು ಕೆಂಪಾಗಿದೆ ಒಡಲು
ಇನಿಯ ನಿನ್ನಯ ನೆನೆದು
ನೂರೊಂದು ಬವಣೆ ಪಡಲು
ಕೇಳಿತೆನ್ನಯ ಮನವು
ಯಾತಕೆ ಈ ಪಯಣ
ಯಾರಿಗಾಗಿ ಈ ಯಾನ

ಮಳೆಯ ವರವಾಗಿ
ಮಲೆಯ ಮಗಳಾಗಿ
ಇಳೆಗೆ ಶರಣಾಗಿ
ನಿನಗೆ ಮರುಳಾಗಿ

ಹುಟ್ಟಿದೊಂದೂರು
ಬೆಳೆದದೊಂದೂರು
ನೋವುಗಳು ನೂರು
ಪ್ರೀತಿಯೊಂದೇ ಸೂರು

ಸಿಡಿಲ ಚಾಟಿಗೆ ಸೊರಗಿ
ಹಿಮದ ಏಟಿಗೆ ಕರಗಿ
ಕಾದ ಶಿಲೆಗಳಿಗೆ ಒರಗಿ
ನಿನ್ನ ಕಾಣದೆ ಮರುಗಿ
ಇನಿಯ ನಾ ಪಟ್ಟ ಪಾಡು
ನಿನಗೇನು ಗೊತ್ತು

ಕಾಡು ಮೇಡನು ಅಲೆದು
ಬಂದು ಸೇರಿದೆ ನಿನ್ನ
ಬಾಹುಬಂಧನವಿತ್ತು
ಚುಂಬಿಸಬಾರದೆ ಚಿನ್ನ

ಈ ಮೌನ ಚುಚ್ಚುತಿದೆ
ತಿವಿಯುತಿದೆ ಎದೆಯನ್ನು
ನಿಷ್ಕರುಣಿ ಕಡಲು ನೀನು
ಕಾಣಲಾರೆಯಾ ಈ ಪ್ರೀತಿಯನ್ನು

ನಿನ್ನಲೊಂದಾಗಿ ಕರಗಿಹೋಗುವೆ ನಾನು
ನಿನ್ನ ದನಿ ಕೇಳದೆ ಅಳಿದುಹೋಗುವೆ ನಾನು
ಮರೆತುಬಿಡು ನನ್ನ ಪಯಣವನು
ನಿನಗಾಗಿ ನಾ ತಂದ ಪ್ರೀತಿಯನು

ಮುಗಿಲಾಗಿ ಹುಟ್ಟಿ ಬಾ
ಮಳೆಯಾಗಿ ಸುರಿದು ಬಾ
ಝರಿಯಾಗಿ ಹರಿದು ಬಾ
ಗಿರಿಯೇರಿ ಇಳಿದು ಬಾ
ನನ್ನಲಿನ್ನೂ ಉಳಿದಿದ್ದರೆ ಪ್ರೀತಿ
ನಿನ್ನ ನಾ ಮತ್ತೆ ಕಾಣುವೆ ಗೆಳೆ

ನೆನಪು-ಕವಿತೆ

ಕೊನೆಯ ಕವಿತೆಯೊ೦ದನ್ನು ಬರೆದು
ಕಲಮಿನ ಮೊನೆಯನ್ನು ಮುರಿದು
ನನ್ನೊಳಗಿನ ಕವಿ ಅಸುನೀಗುತ್ತಾನೆ
ಒ೦ದು ದಿನ, ಸಾವಿರ ಪ್ರಶ್ನೆಗಳ ಹೊತ್ತು.

ನನ್ನೆಲ್ಲಾ ಕನಸುಗಳು ಒ೦ದೊ೦ದಾಗಿ
ಹಾಳೆಗೆ ಚೆಲ್ಲಿದ ಗಾಢ ಶಾಯಿಯೊಳಗೆ
ಮುಳುಗಿ ಮರೆಯಾಗುವವು
ಯಾವತ್ತೂ ಮೂಡಿರಲಿಲ್ಲವೋ ಎನ್ನುವ ಹಾಗೆ

ನಿನ್ನ ಬಳಿ ನನ್ನ ಕವಿತೆಗಳೂ ಉಳಿಯಲಾರವು.
ನೆನಪುಗಳು?!! ಬಹುಷ, ಉಳಿದೀತೋ ಏನೋ?
ಆದರೆ ನೆನಪುಗಳ ಬಣ್ಣ ಕವಿತೆಗಳ ಹಾಗೆ ಅಲ್ಲ
ಬಿಳಿಚಿಕೊ೦ಡಾವು, ಗುರುತು ಹಿಡಿಯದ ರೀತಿ.

ನಿನ್ನ ಸಾವಿರ ಪ್ರಶ್ನೆಗಳ ವಾರಸುದಾರ ನಾನೇ.
ಉತ್ತರ ನನ್ನಲ್ಲೂ ಇಲ್ಲ, ನನ್ನ ಪದಗಳಲ್ಲೂ ಇಲ್ಲ.
ನನ್ನ ಮೌನದಲ್ಲಿ, ಕವಿತೆಗಳಲ್ಲಿ, ಮಾತುಗಳಲ್ಲಿ
ನೀ ನಡೆಸಿದ ಹುಡುಕಾಟ ಒ೦ದು ಯಾತ್ರೆಯೇ ಸರಿ!

ಎಷ್ಟೊ೦ದು ಮಾತುಗಳು, ಎಷ್ಟೊ೦ದು ಕವಿತೆಗಳು,
ಕವಿಯ ಜೊತೆಗೇ ಮುಗಿದು ಹೋದೀತೇ ಈ ಪ್ರೇಮಕಾವ್ಯ?
ಸಾಗರದ ತೀರದಲ್ಲಿ ಬಿಟ್ಟುಹೋದ ಹೆಜ್ಜೆಯ ನೋಡು,
ಬಹುಷ, ಅಲೆಗಳು ಚುಂಬಿಸುವ ತನಕ ಮಾತ್ರ ಅಸ್ತಿತ್ವ ನನಗೆ.

ಕಾಶ್ಮೀರಿ ಸ್ಕಾರ್ಫಿನ ಹುಡುಗಿ

ಡಿಸೆ೦ಬರಿನ ಕೊರೆವ ಚಳಿ
ಹೆಪ್ಪಿಡುವ ಕುಳಿರ್ಗಾಳಿ
ತರಗೆಲೆಗಳ ಮೆಲುನುಡಿ
ದಾರಿದೀಪದ ಹೊನ್ನಬೆಳಕು.

ಶಿಶಿರ ಋತು ಬ೦ದು
ಎದೆಯ ಕದ ತಟ್ಟಿದ೦ದು
ಕಲ್ಲ ಬೆ೦ಚಿನ ಮೇಲೆ
ಶಿಲೆಯಾಗಿ ಕೂತಿದ್ದಳಾಕೆ.

ಮ೦ಜಾಗಿ ಸುರಿಯುತ್ತಿವೆ
ನೆನಪುಗಳು ಬಿಡದೆ,
ಅರಸುವಳು ಬದುಕನ್ನು
ಛಲವನ್ನು ಬಿಡದೆ.

ಶಿಶಿರನೇ ಬಲ್ಲ ಆಕೆಯ ಕತೆ,
ನೆನಪುಗಳೋ, ಕನಸುಗಳೋ
ಕಳೆಗು೦ದಿದ ಕ೦ಗಳಲಿ
ಹಿಮಗಟ್ಟಿದ ಮಾತುಗಳೋ

ಕಾಶ್ಮೀರಿ ಸ್ಕಾರ್ಫೊ೦ದು
ಕತ್ತನ್ನು ಸುತ್ತಿ, ಬಿಸಿ
ಮುತ್ತೊ೦ದನ್ನು ಬಚ್ಚಿಟ್ಟಿತ್ತು
ಇನ್ನೊದು ಋತುವಿಗಾಗಿ

ಮುಚ್ಚಿಟ್ಟ ಅ೦ಗೈಯೊಳಗೆ
ಬಚ್ಚಿಟ್ಟ ಕತೆ ಸಾವಿರ
ಚಳಿಗೆ ನೆನೆದು ನೆನಪಾದ
ಮಾತುಗಳೋ ಮಧುರ.

ಮುತ್ತನ್ನು ಮುಚ್ಚಿಟ್ಟ ಸ್ಕಾರ್ಫಿನ೦ತೆ
ಮಾತನ್ನು ಹೆಪ್ಪಿಟ್ಟ ಮೌನದ೦ತೆ
ಚಳಿಗಾಲ ತ೦ದಿಡುವ ನೀರವತೆಗೆ
ಗೆಳೆಯನೊಬ್ಬನ ಮಾತು ಬೇಕಾಗಿದೆ
ಕಲ್ಲ ಬೆ೦ಚಿನಲ್ಲಿ ಶಿಲೆಯಾದ ಆಕೆಗೆ.

ನಿನ್ನೆಯ ಒ೦ದು ತುಣುಕು

ಎಷ್ಟೋ ವರ್ಷಗಳ ಹಿಂದೆ
ನೀನು ಓದಿದ್ದ ಪುಸ್ತಕವೊ೦ದು
ಇ೦ದು ಕೈಗೆ ಸಿಕ್ಕಿತು.

ಬಿಳಿ ಹಾಳೆಗಳೆಲ್ಲಾ
ಹಳದಿ ಬಣ್ಣಕ್ಕೆ ತಿರುಗಿ
ಅಕ್ಷರಗಳು ಮಾಸತೊಡಗಿದ್ದವು.

ಪುಟಗಳಲ್ಲೆಲ್ಲಾ
ನಿನ್ನ ಕೈಬೆರಳುಗಳು
ಸವರಿದ  ನೆನಪುಗಳಿದ್ದವು.

ಆ ಸಾಲುಗಳನ್ನು ಓದಿ
ನಕ್ಕ ನಿನ್ನ ನಗು
ಇನ್ನೂ ಅವುಗಳಲ್ಲಿ ಪ್ರತಿಧ್ವನಿಸುತಿತ್ತು.

ಒ೦ದು ರಾತ್ರಿ ನಿನ್ನೆದೆಗೆ
ಅಪ್ಪಿ ಹಿಡಿದ ಶಾಖ
ಅದರಲ್ಲಿ ಆರದೆ ಹಾಗೆಯೇ ಇತ್ತು.

ಹಾಳೆಯೊಂದನ್ನು ಮಡಚಿ ಮಾಡಿದ್ದ
ಕಿವಿ ಗುರುತಿನಲ್ಲಿ
ನೀನು ನನ್ನವಳಾಗಿದ್ದ ಕ್ಷಣವೊಂದು
ಸಿಕ್ಕಿಹಾಕಿಕೊಂಡಿತ್ತು.

ನಿನ್ನೆ-ಇ೦ದು-ನಾಳೆಗಳ ಹೊರಗೆ
ಉಳಿದ ನಿರರ್ಥಕ ಕ್ಷಣ.
ಆ ಹಾಳೆಯ ಕಿವಿ ಬಿಡಿಸಿ
ಅದಕ್ಕೊ೦ದು ಮುಕ್ತಿ ನೀಡಿದೆ.

IMG_20130917_164949

ಕೆಲವು ಹಾಯ್ಕುಗಳು

ಹಾಯ್ಕುಗಳಿಗೆ ಅದರದ್ದೇ ಆದ ಸೌಂದರ್ಯವಿದೆ. ಸುಪ್ತವಾದ ಪ್ರತಿಮೆಗಳು ಇವುಗಳಲ್ಲಿ ಅಡಗಿವೆ. ಹಾಯ್ಕುಗಳ ಭಾಷೆಯನ್ನು ಅರಿಯಲು ನಾನು ಈ ಹಾಯ್ಕುಗಳು ಬರೆದೆ. ಇನ್ನೂ ಬರೆಯಬೇಕು. ಯಾವಾಗ? ಗೊತ್ತಿಲ್ಲ.

(1)

ಮುರಿದ ಸೂಜಿಯೊಂದು

ಮೌನ ರಾಗ ಹಾಡಿತು

ಹಳೆಯ ಗ್ರಾಮೊಫೋನಿನಲ್ಲಿ

(2)

ಗೋಡೆಗಳಿಲ್ಲದ ಕೋಣೆಗೆ

ಭಧ್ರ ಬೀಗ,

ದೋಚುವ ಭಯವಿಲ್ಲ

(3)

ಎವರೆಸ್ಟ್ ಏರಬೇಕು –

ಬಾವುಟ ನೆಟ್ಟು

ಮೇಲಿನಿಂದ ಕೆಳಗೆ

(4)

ನಾ ಬರೆದ ಕವಿತೆ

ನೀರಲ್ಲಿ ತೇಲಿದೆ

ಕಾಗದದ ದೋಣಿ ಮೇಲೆ

(5)

ಮೈಸೂರ ಮಹಲಿನ ಹೊರಗೆ

ನನ್ನ ಅರಮನೆ

ಬೆಳದಿಂಗಳ ಜೋಪಡಿ

(6)

ಬಿರುಗಾಳಿ ನಡುವೆ ಕಾಫಿಶಾಪ್

ಕೈಯ್ಯಲ್ಲೊಂದು ಕಪ್ ಕಾಫಿ

ಕಾಫಿಯೊಳಗೊಂದು ಬಿರುಗಾಳಿ

೨೧ ಕವಿತೆಗಳು

ಕೆಲವು ಕವಿತೆಗಳು. ಹಾಗೆ ಸುಮ್ಮನೆ ಮನಸ್ಸಿಗೆ ಬ೦ದದ್ದು. ಸ೦ಭಾಷಣೆಗಳ ನಡುವೆ ಹುಟ್ಟಿಕೊಡದ್ದು. ಟಿಷ್ಯು ಪೇಪರ್ ಗಳ ಮೇಲೆ ಬರೆದದ್ದು.  ಟ್ವಿಟ್ಟರ್, ಮೆಸೇಜ್ ಗಳಲ್ಲಿ ಕಳಿಸಿದ್ದು. ಅವುಗಳನ್ನೇ ಇಲ್ಲಿ ಮತ್ತೊಮ್ಮೆ ನಿಮಗಾಗಿ ಪ್ರಸ್ತುತ ಪಡಿಸುತ್ತಿದ್ದೇನೆ ಅಷ್ಟೇ.

(೧)

ಬಾಚಣಿಗೆ ಕಾಣದ ಹೆರಳು

ಆಚರಣೆಗೆ ಕೇಳದ ಸೌಂದರ್ಯ

ಮಾತುಗಳೇ ಆಭರಣ

ಭಾವನೆಗಳೇ ಬದುಕು

ನೀನೊಂದು ಕವಿತೆಯಲ್ಲದೆ

ಮತ್ತಿನ್ನೇನು ಹುಡುಗಿ?

(೨)

ಕಾತುರ:

ಭಾವನೆಗೆ ಪದಗಳಾಗುವ ತವಕ

ಪದಗಳಿಗೆ ಕವನವಾಗುವ ತವಕ

ಕವನಗಳಿಗೆ ನಿನ್ನ ಸೇರುವ ತವಕ

ನಿನಗೆ ನನ್ನ ನೋಡಬೇಕೆನ್ನುವ ತವಕ

(೩)

ನಿನ್ನೊ೦ದಿಗೆ ನಾನು ಕಳೆವ ಕ್ಷಣಗಲಿ ಅದೇನೋ ಮಜವಿದೆ

ನಿನ್ನೊ೦ದಿಗೆ ನಾನು ನಾನಾಗಿಯೇ ಇರುವೆ ಅನ್ನುವ ಖುಷಿಯಿದೆ

(೪)

ದೇಶ ಕಾಲದಾಚೆಗೆ

ಹಾಯಿ ಕಟ್ಟಿ ನಾವೆಗೆ

ಪಯಣವೊಂದು ಸಾಗಿದೆ

ನಿನ್ನಿಂದ ನನ್ನೆಡೆಗೆ ನನ್ನಿಂದ ನಿನ್ನೆಡೆಗೆ

(೫)

ಮುದ್ದು ಮುದ್ದು ಮಾತುಗಳು

ಕಾಗದದ ದೋಣಿಗಳು

ನನ್ನ ನಿನ್ನ ನಡುವೆ ಸಾಗುತ್ತಿವೆ

ಅನ೦ತ ಚಿತ್ರ ಸಾಲುಗಳು

(೬)

ನಿನ್ನ ಮನಸ ನಾನು ಹೇಗೆ ಕದಿಯಲಿ ಗೆಳತಿ?

ನನ್ನ ಮನೆಯ ನಾನು ಹೇಗೆ ದೋಚಲಿ ಗೆಳತಿ?

(೭)

ಇರುಳು ಇನ್ನು ಕವಿಯುವ ಮುನ್ನ

ಮರಳು ನನ್ನ ಕಸಿಯುವ ಮುನ್ನ

ಕಡಲಲೆಗಳೇ ಹಾಡಬಾರದೇಕೆ

ನನ್ನ ಮರೆತು ಹೋದ ಕವಿತೆ

(೮)

ಕೇಳು ಕನಸಿನಲೆಗಳ ಶೃತಿಯ

ಮಾಸಿ ಹೋದ ನಿನ್ನೆಗಳ ಸ್ಮೃತಿಯ

ಹುಡುಕಿ ನೋಡು ಮೊಹೆಂಜಾದಾರೋದಲ್ಲಿ

ಹುದುಗಿ ಹೋಗಿರುವ ಪಿಕಾಸೊ ಕೃತಿಯ

(೯)

ಸುರಿದು ಭಾವದ ಮದಿರೆ

ನನ್ನೆದೆಯ ಶೀಶೆಯಲಿ

ಮೀನಾಗಿ ಈಜುತ್ತಿರುವೆಯಾ

ಕವಿತೆಗಳ ಕಡಲಲಿ

(೧೦)

ನಮ್ಮಿಬ್ಬರ ನೋವಿನಲ್ಲಿ ಸಾಮ್ಯತೆಯಿದೆ ಗೆಳತಿ

ಸುಮ್ಮನೆ ಹೇಗೆ ನೀನು ನಿನ್ನನ್ನು ನನ್ನಲ್ಲಿ ಕಾಣುತಿ?

(೧೧)

ರಾತ್ರಿ :

ಮೌನವ ಮಾತುಗಳು ಹೊತ್ತು,

ಮೌನವೇ ಮಾತಾಗುವ ಹೊತ್ತು…

(೧೨)

ಪುಟ್ಟ ಹೃದಯದ ತುಂಬೆಲ್ಲಾ

ಸುಟ್ಟ ಕಲೆಗಳು

ನಿನ್ನ ನೆನಪುಗಳ ಅಳಿಸಲು

ಮಾಡಿಕೊಂಡ ಸಿಗರೆಟ್ ಗಾಯಗಳು

(೧೩)

ಸೋನೆ ಮಳೆಯಲ್ಲಿ ನೆನೆಯುತ್ತಾ ಮನಸ್ಸು ಒದ್ದೆಯಾಯಿತು

ನಿನ್ನ ನೆನಪುಗಳಲ್ಲಿ ಇನ್ನೊಮ್ಮೆ ತೋಯ್ದುಬಿಟ್ಟಿತು

(೧೪)

ಈ ಗೀತೆಗಳ ತುಂಬೆಲ್ಲಾ ನಾವಿಬ್ಬರೇ ಓಡಾಡಿಕೊಂಡಿದ್ದೆವಲ್ಲಾ

ಬಹುಷಃ ಅದಕ್ಕೇ ಇರಬೇಕು ನಾನು ಇನ್ನೂ ಇವುಗಳಲ್ಲಿ ನಿನ್ನನು ಅರಸುತ್ತಿರುವುದು

(೧೫)

ನೀನು ನನ್ನಿ೦ದ ದೂರವಾದ೦ದು

ಈ ಕವಿತೆಗಳನ್ನೇಕೆ ಬಿಟ್ಟುಹೋದಿ?

ಈಗ ನನ್ನ ಬಳಿ ನೀನಿಲ್ಲ.

ಆದರೆ,

ನಿನಗಾಗಿ ಕವಿತೆಗಳ ಬರೆಯುವ ಹುಚ್ಚು ಇನ್ನೂ ನಿ೦ತಿಲ್ಲ

(೧೬)

ಒಂದು ದಿನ ನೀನು ನನ್ನ ಬಿಟ್ಟು ಹೋದಿ

ಕತ್ತಲನ್ನು ಹಾಸಿ ಮರೆಯಾದ ಸೂರ್ಯನ೦ತೆ

ಬಾಳು ಬರಿ ಮೌನವೆನಿಸತೊಡಗಿದಾಗ

ಎಲ್ಲಿ೦ದಲೋ ಮೂಡಿ ಬ೦ದ ಶಶಿ

(ಇದು ನನ್ನ ಗೆಳತಿ ಶ್ರುತಿಯವರ ಇ೦ಗ್ಲಿಷ್ ಕವನದ ಅನುವಾದ)

(೧೭)

ಮನದ ರಂಗಶಾಲೆಯಲ್ಲಿ ಇಂದು ಶಿವತಾಂಡವ

ರುದ್ರನ ಕ್ರೋಧ, ಮತ್ಸರ, ಭಯದ ಮುದ್ರಿಕೆಗಳ ಸವಿಯಲು ಬೇಕಾಗಿದೆ ಪ್ರೇಕ್ಷಕಗಣ

(೧೮)

ನೀನಿಲ್ಲದಿರೆ ಏನ೦ತೆ,

ನಿನ್ನೊ೦ದಿಗೆ ಕಳೆದ ಕ್ಷಣಗಳು ಇನ್ನೂ ಇವೆ ನನ್ನೊ೦ದಿಗೆ

ಈ ಪ್ರೇಮಿಗಳ ದಿನ

(೧೯)

ಪುಸ್ತಕದ ಹಾಳೆಗಳ ತುಂಬಿರುವ ಕವಿತೆ ನೀನು

ಮಸ್ತಕವ ಎಡೆಬಿಡದೆ ತಿನ್ನುತಿರುವ ಬೆಳ್ಳಿ ಮೀನು

(೨೦)

ಮನದ ಗಂಗಾ ತೀರದಲ್ಲಿ ಇಂದು ಮತ್ತೆ ನಿನ್ನ ನೆನಪುಗಳ ಮಹಾಕುಂಭ

ಅದೇ ನದಿ, ಅದೇ ನಾನು, ನಿನಗೆ ಯಾಕೋ ಹಿಂತಿರುಗಿ ಬರಬಾರದೆನ್ನುವ ಜಂಭ

(೨೧)

ರಾತ್ರಿಯಲ್ಲಿ ಅವಿತುಕುಳಿತ ಬಣ್ಣಗಳೆಷ್ಟೋ?

ಎದೆಯ ಕಪಾಟಿನಲ್ಲಿ ಅಡಗಿಸಿಟ್ಟ ಕತೆಗಳೆಷ್ಟೋ?