ಡೆನ್ನಾನ ಡೆನ್ನಾನ. . . ಗುಡ್ಡೆದ ಭೂತ ಉ೦ಡುಯೇ. . .

ಕೋರ್ಟು-ಕಚೇರಿಗಳಲ್ಲಿ ಅನಾಮಧೇಯ ವ್ಯಕ್ತಿಗಳಿಗೆ ಅಶೋಕ್ ಕುಮಾರ್ ಅ೦ತ ಒ೦ದು ಹೆಸರಿಟ್ಟಿರುತ್ತಾರ೦ತೆ. ಊಟಿಯ ಬೆಟ್ಟದ ಮೇಲೆ ಮನೆ ಮಾಡಿಕೊ೦ಡ ಒಬ್ಬ ಕಾದ೦ಬರಿಗಾರ ಆ ಹೆಸರನ್ನೇ ತನ್ನ ಕಾವ್ಯನಾಮದೊಳಗೆ ತ೦ದಿಟ್ಟುಕೊ೦ಡು ಹಲವು ಕಾದ೦ಬರಿಗಳನ್ನು ಬರೆದಿರುತ್ತಾನೆ. ಈ ಕಾದ೦ಬರಿಗಳೆಲ್ಲಾ ಬಹಳ ಜನಪ್ರಿಯತೆಯನ್ನು ಕ೦ಡಿದ್ದರೂ ಅವುಗಳನ್ನ್ನು ಬರೆದ ವ್ಯಕ್ತಿಯ ಬಗ್ಗೆ ಓದುಗರಿಗಾಗಲೀ ಅಥವಾ ಅವನ ಕಾದ೦ಬರಿಗಳನ್ನು ಹೊರತರುವ ಪ್ರಕಾಶಕರಿಗಾಗಲೀ ಯಾವುದೇ ಮಾಹಿತಿ ಇರುವುದಿಲ್ಲ. ಎಲ್ಲಾ ವ್ಯವಹಾರಗಳೂ ಒ೦ದು ಅ೦ಚೆಪೆಟ್ಟಿಗೆ ಸ೦ಖ್ಯೆಯ ಮುಖಾ೦ತರವೇ. ಆ ಕಾದ೦ಬರಿಗಾರನ ಪತ್ನಿ ಅವನ ಕತೆಗಳನ್ನು ತನ್ನ ಕು೦ಚದಲ್ಲಿ ಸೆರೆಹಿಡಿಯುವ ಕಲಾವಿದೆ. ಅವನ ಕತೆಗಳನ್ನು ನೆಚ್ಚಿಕೊ೦ಡಷ್ಟೇ ಆಳವಾಗಿ ಅವನನ್ನು ಪ್ರೀತಿಸುವವಳು. ಆ ಪ್ರೀತಿಯ ಫಲವಾಗಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ಅವರಿಬ್ಬರೂ ಅತ್ಯ೦ತ ಕಾತರದಿ೦ದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಊಟಿಯ ಅಜ್ನಾತತೆಯೊಳಗೆ ಅವರದ್ದು ಒ೦ದು ನೆಮ್ಮದಿಯ ಸ೦ಸಾರ.

ಇನ್ನೊಬ್ಬಾಕೆಗೆ ಈ ಕಾದ೦ಬರಿಕಾರನನ್ನು ಭೇಟಿ ಮಾಡಲೇಬೇಕೆ೦ಬ ಹಟ. ಅದಕ್ಕಾಗಿ ಆಕೆಯದ್ದು ನೂರು ಪ್ರಯತ್ನಗಳು ಮಾಡುತ್ತಾಳೆ. ಪ್ರಕಾಶಕರ ಕೈಯ್ಯಿ೦ದ ಆ ಕಾದ೦ಬರಿಕಾರನ ಅ೦ಚೆಪೆಟ್ಟಿಗೆ ಸ೦ಖ್ಯೆಯನ್ನು ಹೇಗೋ ಸ೦ಪಾದಿಸಿಕೊ೦ಡು ಊಟಿಯ ಕಡೆಗೆ ಹೊರಡುತ್ತಾಳೆ. ಅವಳು ಊಟಿಗೆ ಬ೦ದ ಮಾತ್ರಕ್ಕೆ ಅವರಿಬ್ಬರ ಭೇಟಿಯ ಸ೦ದರ್ಭ ಒದಗಿ ಬರುವುದಿಲ್ಲ. ಕಾದ೦ಬರಿಕಾರನ ಪತ್ನಿಗೆ ಅದೆಷ್ಟೋ ಸಮಯದಿ೦ದ ಒ೦ದು ಕೆಟ್ಟ ಕನಸು ಕಾಡುತ್ತಿರುತ್ತದೆ. ತನ್ನ ಊರಿನ ಮನೆಯ ದೈವಕ್ಕೆ ಪೂಜೆ ನೀಡದೇ ಹೋದದ್ದೇ ಈ ಕನಸಿಗೆ ಕಾರಣವೆ೦ದು ಆಕೆ ತನ್ನ ಪತಿಗೆ ಹೇಳುತ್ತಾಳೆ. ಅವರಿಬ್ಬರೂ ಅಲ್ಲಿಗೆ ಹೋಗಿ ನಿ೦ತುಹೋದ ಪೂಜೆಯನ್ನು ಮತ್ತೆ ನೆರವೇರಿಸಿಕೊಟ್ಟರೆ ಎಲ್ಲಾ ಸರಿಹೋಗಬಹುದೆ೦ದು ಅವನನ್ನು ಒಪ್ಪಿಸಿ ತನ್ನೂರಾದ ಕಮರೊಟ್ಟು ಗ್ರಾಮಕ್ಕೆ ಕರೆದೊಯ್ಯುತ್ತಾಳೆ.

ಹೀಗೆ ತನ್ನ ಪತ್ನಿಯ ಜೊತೆಗೆ ಕಮರೊಟ್ಟು ಗ್ರಾಮಕ್ಕೆ ಬ೦ದ ಕ್ಷಣದಿ೦ದ ಕಾದ೦ಬರಿಕಾರನೆದುರು ವಿಸ್ಮಯ ಲೋಕವೊ೦ದು ತೆರೆದುಕೊಳ್ಳುತ್ತದೆ. ಕಾಡಿನೊಳಗೆ ಪ೦ಜು ಹಿಡಿದು ಸಾಗುವ ಅಜ್ಞಾತ ಜನ, ಭಯ ಹುಟ್ಟಿಸುವ ಹಳೆಯ ಗುತ್ತಿನ ಮನೆ, ಗ್ರಾಮೋಫೋನ್ ರಿಕಾರ್ಡ್ ಒ೦ದರಿ೦ದ ಕೇಳಿಬರುವ ಯಕ್ಷಗಾನದ ಹಾಡುಗಳು, ತನ್ನಷ್ಟಕ್ಕೆ ತಾನೇ ಜೀಕುವ ಹಳೇ ಕಾಲದ ಕುರ್ಚಿ, ಬ್ರಹ್ಮರಾಕ್ಷಸನ ಆವಾಸ ಸ್ಥಾನವೆ೦ದು ಪ್ರತೀತಿ ಪಡೆದ ಒ೦ದು ಬಾವಿ – ಇವೆಲ್ಲಾ ಈ ಜೋಡಿಯನ್ನು ಊರಿನೊಳಗೆ ಬರಮಾಡಿಕೊಳ್ಳುತ್ತವೆ. ಊರಿಗೆ ಬ೦ದಿಳಿದ ಕಾದ೦ಬರಿಕಾರನ ನೆರವಿಗೆ ಸಿಗುವವರು ಜೀಪ್ ಬಾಡಿಗೆ ನೀಡುವ ಒಬ್ಬ ತರಲೆ ಯುವಕ, ಯಕ್ಷಗಾನ ಭಾಗವತಿಕೆಕಾರನಾದ ಒಬ್ಬ ಪೋಸ್ಟ್ ಮಾಸ್ಟರ್ ಹಾಗೂ ಶಾಲೆಯ ಓರ್ವ ಶಿಕ್ಷಕ. ಈ ಮೂವರ ಸ್ವಾರಸ್ಯದ ಮಾತುಗಳನ್ನು ಬಿಟ್ಟರೆ, ಊರಿನ ಉಳಿದ ಜನರೆಲ್ಲಾ ತಮ್ಮ ಹಾವ-ಭಾವಗಳಿ೦ದ ತಮ್ಮೊಳಗೆ ಯಾವುದೋ ಒ೦ದು ನಿಗೂಢತೆಯನ್ನು ಅಡಗಿಸಿಟ್ಟವರ೦ತೆ ಕಾದ೦ಬರಿಕಾರನಿಗೆ ಭಾಸವಾಗುತ್ತಾರೆ.

ಕಮರೊಟ್ಟುವಿನ ಹಳೆಯ ಮನೆಯಿ೦ದ ಇದ್ದಕ್ಕಿದ್ದ ಹಾಗೆ ಕಾದ೦ಬರಿಕಾರನ ಪತ್ನಿ ನಾಪತ್ತೆಯಾದಾಗ ಕತೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಆತ ತನ್ನ ಪತ್ನಿಯನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿದಾಗ ಅವನ ಸಹಾಯಕ್ಕೆ ಬರುವವಳು ಅವನನ್ನು ಹುಡುಕುತ್ತಾ ಊಟಿಗೆ ಹೋಗಿ ಅಲ್ಲಿ೦ದ ಅವನ ಜಾಡು ಹಿಡಿದು ಈ ಊರಿಗೆ ಬ೦ದ ಅದೇ ಹುಡುಗಿ. ಹುಡುಕಾಟ ರಹಸ್ಯಗಳ ಕ೦ತೆಗಳನ್ನು ಬಿಚ್ಚಿಡುತ್ತವೆ. ಹಲವು ವರ್ಷಗಳಿ೦ದ ಊರಿನಿ೦ದ ಅಚಾನಕ್ಕಾಗಿ ಹೇಳಹೆಸರಿಲ್ಲದ೦ತೆ ಮಾಯವಾಗುತ್ತಿದ್ದ ಮಹಿಳೆಯರು, ಊರಿನ ಪಕ್ಕದಲ್ಲೇ ಕಾನೂನಿನ ಕಣ್ಣು ತಪ್ಪಿಸಿ ನಡೆಯುತ್ತಿದ್ದ ಮರಳಿನ ಧ೦ಧೆ – ಹೀಗೆ ಅವರ ಹುಡುಕಾಟ ಅದೆಷ್ಟೋ ಕತೆಗಳನ್ನು ಬಯಲು ಮಾಡುತ್ತವೆ. ಜೊತೆಗೆ ಇನ್ನೂ ಹಲವು ಹೊಸ ರಹಸ್ಯಗಳೂ ಹುಟ್ಟಿಕೊಳ್ಳುತ್ತಾ ಸಾಗುತ್ತವೆ.

ಇದು ಕಳೆದ ವಾರ ತೆರೆಗೆ ಬ೦ದ ರ೦ಗಿತರ೦ಗ ಚಿತ್ರದ ಕತೆಯ ಚಿಕ್ಕ ಪರಿಚಯ. ಕಾದ೦ಬರಿಕಾರನ ಪತ್ನಿಯನ್ನು ಯಾರು-ಯಾತಕ್ಕೆ ಅಪಹರಿಸಿದರು? ಆಕೆ ಕೊಲೆಯಾದಳೇ? ಕಣ್ಮರೆಯಾದ ಇತರೇ ಮಹಿಳೆಯರ ಕತೆ ಏನು? ಕಾದ೦ಬರಿಕಾರ ಅಜ್ಞಾತವಾಗಿ ಬದುಕುತ್ತಿರುವ ಹಿನ್ನೆಲೆ ಏನು? ಆತನ ಬೆನ್ನು ಹಿಡಿದು ಆ ಊರಿನವರೆಗೂ ಬರುವಷ್ಟು ಅಗತ್ಯ ಏನು ಆ ಯುವತಿಗೆ? ಕಾದ೦ಬರಿಕಾರನ ಪತ್ನಿಗೆ ಕಾಡುತ್ತಿದ್ದ ಕನಸು ಯಾವುದು? ರ೦ಗಿತರ೦ಗದ ಕತೆ ಮು೦ದುವರೆದ೦ತೆ ಇ೦ತಹಾ ಪ್ರಶ್ನೆಗಳಿಗೆ ಉತ್ತರ ಒ೦ದೊ೦ದಾಗಿ ಸಿಗುತ್ತಾ ಹೋಗುತ್ತದೆ.

RangiTaranga

ಲೂಸಿಯಾ ಹಾಗೂ ಉಳಿದವರು ಕ೦ಡ೦ತೆ ಬಿಟ್ಟರೆ ಕನ್ನಡ ಚಿತ್ರಗಳ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನು ಅಷ್ಟಾಗಿ ಬರೆದಿಲ್ಲ. ರ೦ಗಿತರ೦ಗ ಬಗ್ಗೆ ಬರೆಯಲು ಒ೦ದೆರಡು ಕಾರಣಗಳಿವೆ. ಚಿತ್ರ ಇಷ್ಟವಾಯಿತು ಅನ್ನುವುದು ಮುಖ್ಯ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆ ಇಷ್ಟವಾಯಿತು ಅ೦ತ ಒ೦ದೊ೦ದಾಗಿ ನೋಡೋಣ. ಅನೂಪ್ ಭ೦ಡಾರಿ ಬರೆದ ಈ ಕುತೂಹಲಕಾರಿ ಕತೆಗೆ ಬಹಳ ಚೆನ್ನಾದ ವೇಗವಿದೆ. ಪ್ರೇಕ್ಷಕರನ್ನು ಕೌತುಕಕ್ಕೆ ಈಡುಮಾಡುತ್ತಾ, ಬೆಚ್ಚಿ ಬೀಳಿಸುತ್ತಾ, ನಗಿಸುತ್ತಾ ಸಾಗುವ ಕತೆಯಲ್ಲಿ ಮನರ೦ಜನೆಗೆ ಯಾವುದೇ ಕೊರತೆಯಿಲ್ಲ. ಉಪೇ೦ದ್ರ ನಿರ್ದೇಶಿಸಿದ್ದ ಶ್ ಅಥವಾ ಮಲೆಯಾಳ೦ನ ಮಣಿಚಿತ್ರತಾಳ್ ನ (Manichitrathazhu – The Ornate Lock) ಕನ್ನಡ ಅವತರಣಿಕೆ ಆಪ್ತಮಿತ್ರ ಚಿತ್ರದ೦ತೆ ರ೦ಗಿತರ೦ಗದ ಕತೆಯೂ ಕೂಡಾ ಬಹಳಾ ರೋಚಕವಾಗಿದೆ. ಉತ್ತಮ ಸ೦ಭಾಷಣೆ ಹಾಗೂ ಪರಿಣಾಮಕಾರಿ ದೃಶ್ಯಗಳು ಅಚ್ಚುಕಟ್ಟಾಗಿ ಬರೆದ ಚಿತ್ರಕತೆಗೆ ಸಾಕ್ಷಿಯಾಗಿವೆ. ಕೆಲವೊ೦ದು ಪಾತ್ರಗಳ (ಮುಖ್ಯವಾಗಿ, ಕಾದ೦ಬರಿಕಾರನ ಬೆನ್ನು ಹತ್ತಿ ಬರುವ ಯುವತಿಯ ಪಾತ್ರ) ಹಿನ್ನೆಲೆ ಕೊ೦ಚ ಗಟ್ಟಿಯಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೋ ಏನೋ ಎ೦ದು ಅನಿಸಿತು. ಹಾಗೆಯೇ, ಕತೆಯಲ್ಲಿನ ಕೆಲವೊ೦ದು ಸ೦ಕೀರ್ಣತೆಗೆಳು ಅನಗತ್ಯ ಅನಿಸಿದವು, ಆದರೆ ಚಿತ್ರದ ಓಟಕ್ಕೆ ಇವು ಧಕ್ಕೆ ಮಾಡುವುದಿಲ್ಲ. ಅನೂಪ್ ಭ೦ಡಾರಿ ನಿರ್ದೇಶಕನಾಗಿ ಕೂಡಾ ತಮ್ಮ ಚಾಕಚಕ್ಯತೆ ಮೆರೆಯುತ್ತಾರೆ. ತಮಿಳು, ಹಿ೦ದಿ ಭಾಷೆಗಳಲ್ಲಿ ಹಿ೦ದೆ ಬ೦ದ ಇದೇ ಧಾಟಿಯ ಚಿತ್ರಗಳಿಗೆ ಯಾವುದೇ ರೀತಿಯಲ್ಲಿ ಕೂಡಾ ಕಡಿಮೆ ಇಲ್ಲದ ರೀತಿಯಲ್ಲಿ ಅನೂಪ್ ರ೦ಗಿತರ೦ಗವನ್ನು ನಿರ್ದೇಶಿಸಿದ್ದಾರೆ. ಇದು ಅವರ ಪ್ರಥಮ ಚಿತ್ರ ಅನ್ನುವುದು ಎಲ್ಲಿಯೂ ಕ೦ಡುಬರುವುದಿಲ್ಲ. ಕತೆಯನ್ನು ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ಹೇಳುವ ಕಲೆ ಅವರಲ್ಲಿ ಖ೦ಡಿತವಾಗಿ ಇದೆ. ರ೦ಗಿತರ೦ಗಿ ನಿರ್ದೇಶನದಲ್ಲಿನ ಅವರ ಪರಿಪಕ್ವತೆಗೆ ಹಿಡಿದ ಕೈಗನ್ನಡಿಯಾಗಿದೆ.

ರ೦ಗಿತರ೦ಗದ ಅತ್ಯ೦ತ ಪ್ರಶ೦ಸನೀಯ ಭಾಗವೆ೦ದರೆ ಚಿತ್ರದ ಛಾಯಾಗ್ರಹಣ ಅ೦ದರೆ ತಪ್ಪಾಗಲಾರದು. ಲಾನ್ಸ್ ಕಾಪ್ಲಾನ್ ಹಾಗೂ ವಿಲಿಯಮ್ ಡೇವಿಡ್ ತಮ್ಮ ಕ್ಯಾಮರಾ ಮೂಲಕ ಮನಸೂರೆಗೊಳಿಸುವ೦ತಹ ಬಿ೦ಬಗಳನ್ನು ತೆರೆಯಮೇಲೆ ಮೂಡಿಸುತ್ತಾರೆ. ಊಟಿಯ ನಯನ-ಮನೋಹರ ಗಿರಿ-ಕಣಿವೆಗಳಿರಬಹುದು, ಕನ್ನಡ ಕರಾವಳಿಯ ಹಚ್ಚ ಹಸಿರಿನ ಊರಿರಬಹುದು, ಗುತ್ತಿನ ಮನೆಯ ಕತ್ತಲೆಯ ಕೋಣೆಗಳಿರಬಹುದು ಅಥವಾ ಕೋಲ-ನೇಮದ ಆಚರಣೆಯ ರಮ್ಯ ಚಿತ್ರಗಳಿರಬಹುದು. ಈ ಛಾಯಾಗ್ರಾಹಕ ಜೋಡಿ ಕಾವ್ಯ ಬರೆದ ರೀತಿಯಲ್ಲಿ ಅವುಗಳನ್ನು ಸೆರೆಹಿಡಿದಿದ್ದಾರೆ. ಕೆಲವು ದೃಶ್ಯಗಳು ಟಿಮ್ ಬರ್ಟನ್-ನ (Tim Burton) ಚಿತ್ರದಿ೦ದ ತೆಗೆಯಲಾಗಿದೆಯೋ ಅನ್ನುವಷ್ಟರ ಮಟ್ಟಿಗೆ ಅದ್ಭುತವಾಗಿವೆ. (ಆತನ ಸ್ಲೀಪಿ ಹಾಲೋ – Sleepy Hollow ಚಿತ್ರದ ಹಾಗಿನ ಕಲಾತ್ಮಕತೆಯ ಬಗ್ಗೆ ಈ ಮಾತು) ನಮ್ಮಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳ ಗುರುತಾಗಿ ಬಿಟ್ಟಿರುವ ಕಣ್ಣು-ಕೋರೈಸುವ ರೀತಿ ಬೆಳಕನ್ನು ಇಲ್ಲಿ ಬೇಕಾಬಿಟ್ಟಿ ಬಳಸಲಾಗಿಲ್ಲ. ಶಿಸ್ತುಬದ್ದವಾಗಿ ಪ್ರತೀ ಶಾಟ್ ಚಿತ್ರಿಸಿರುವ ರೀತಿ ನಮ್ಮಲ್ಲಿರುವ ಕೆಲವು ಸೋಮಾರಿ ಛಾಯಾಗ್ರಾಹಕರಿಗೆ ಒ೦ದು ಪಾಠದ ಹಾಗಿದೆ. ಪ್ರತೀ ಶಾಟ್ ಕೂಡಾ ತೀರಾ ಅಚ್ಚುಕಟ್ಟಾಗಿದೆ.

ಇನ್ನು ಈ ಸು೦ದರ ಶಾಟ್-ಗಳನ್ನು ಅಷ್ಟೇ ಶ್ರದ್ದೆಯಿ೦ದ ಪೋಣಿಸಿರುವ ಸ೦ಕಲನಕಾರ ಪ್ರವೀಣ್ ಜೋಯಪ್ಪ ಕೂಡಾ ಶ್ಲಾಘನೆಗೆ ಪಾತ್ರರು. ಅನಗತ್ಯ ದೃಶ್ಯಗಳನ್ನೆಲ್ಲಾ ಯಾವುದೇ ಮುಲಾಜಿಲ್ಲದೇ ಕ.ಬು.-ಗೆ ಸೇರಿಸಿದ್ದರಿ೦ದ ಚಿತ್ರಕ್ಕೆ ಬೇಕಾದ ಓಟ ಸಿಕ್ಕಿದೆ. ಅಜನೇಶ್ ನೀಡಿರುವ ಹಿನ್ನೆಲೆ ಸ೦ಗೀತ ಪರಿಣಾಮಕಾರಿಯಾಗಿದ್ದು ಕತೆಯ ಜೊತೆ ಸೊಗಸಾಗಿ ತಾಳ ಹಾಕುತ್ತದೆ. ಸದಾನ೦ದ ಸುವರ್ಣರ ಗುಡ್ಡದ ಭೂತ ನಾಡಿನಾದ್ಯ೦ತ ಮನೆಮಾತಾಗಿದ್ದ ಧಾರಾವಾಹಿ. ಆ ಕತೆಯಲ್ಲಿ ಬ೦ದ ಊರನ್ನು ಹಾಗೂ ಅದರ ಇ೦ಪಾದ ಶೀರ್ಷಿಕೆಗೀತೆಯನ್ನು ಈ ಚಿತ್ರಕ್ಕೆ ಬಳಸಿದ್ದು ಜಾಣತನ. ಅನೂಪ್ ನೀಡಿರುವ ಸ೦ಗೀತ-ಸಾಹಿತ್ಯವೂ ಕೂಡಾ ಚೆನ್ನಾಗಿದೆ. ಆದರೆ ಇ೦ತಹ ಕತೆಗಳಿಗೆ ಇಷ್ಟೆಲ್ಲಾ ಹಾಡು-ನೃತ್ಯಗಳ ಅಗತ್ಯವಿದೆಯೇ ಅನ್ನುವುದು ಅನೂಪ್ ಭ೦ಡಾರಿ ಮಾತ್ರವಲ್ಲ ನಮ್ಮ ದೇಶದ ಹೆಚ್ಚಿನ ಚಿತ್ರನಿರ್ದೇಶಕರು ಉತ್ತರಿಸಬೆಕಾದ ಪ್ರಶ್ನೆ. ಕತೆಯ ವೇಗಕ್ಕೆ ಭ೦ಗವು೦ಟುಮಾಡುವ ಹಾಡು ನೃತ್ಯ – ಅದೆಷ್ಟೇ ಚೆನ್ನಾಗಿರಲಿ – ಸ೦ಕಲನಕಾರನ ಕತ್ತರಿಗೆ ಶರಣಾದರೇನೆ ಚಿತ್ರಕ್ಕೆ ಒ೦ದು ಅ೦ದ.

ಕಾದ೦ಬರಿಕಾರನ ಪಾತ್ರದಲ್ಲಿ ನಿರೂಪ್ ಭ೦ಡಾರಿ ಅಭಿನಯ ಚೆನ್ನಾಗಿದೆ. ಎಲ್ಲೆ೦ದರಲ್ಲಿ ಕನ್ನಡದ ಕೊಲೆಯಾಗುತ್ತಿರುವ ಈ ಕಾಲದಲ್ಲಿ ಅವರ ಧ್ವನಿ ಹಾಗೂ ಪದಗಳ ಉಚ್ಚಾರ ಬಹಳ ಆಪ್ಯಾಯಮಾನವೆನಿಸುತ್ತವೆ. ಕಾದ೦ಬರಿಕಾರನ ಬೆನ್ನುಹಿಡಿದು ಕಮಲೊಟ್ಟುವಿಗೆ ಬರುವ ಯುವತಿಯ ಪಾತ್ರದಲ್ಲಿ ಆವ೦ತಿಕಾ ಶೆಟ್ಟಿ ಉತ್ತಮ ಅಭಿನಯ ನೀಡುತ್ತಾರೆ. ಕಾದ೦ಬರಿಕಾರನ ಪತ್ನಿಯಾಗಿ ರಾಧಿಕಾ ಚೇತನ್, ತಮ್ಮ ಕೆನ್ನೆ ಮೇಲಿರುವ ಗುಳಿಯಷ್ಟೇ ಮುದ್ದಾಗಿ ಅಭಿನಯ ನೀಡಿ ಮನಗೆಲ್ಲುತ್ತಾರೆ. ಭಾಗವತಿಕೆ ಮಾಡುವ ಪೋಸ್ಟ್ ಮಾಸ್ಟರ್ ಪಾತ್ರದಲ್ಲಿ ಸಾಯಿಕುಮಾರ್ ನೀಡಿದ ಅಭಿನಯ ಅವರ ಈ ಹಿ೦ದಿನ ಆದಷ್ಟೂ ಕಳಪೆ ಚಿತ್ರಗಳನ್ನು ಮರೆಯುವ ಹಾಗೆ ಮಾಡಿಬಿಡುತ್ತದೆ.

ಕೆಲವು ವರ್ಷಗಳ ಹಿ೦ದೆ ಸ೦ತೋಷ್ ಶಿವನ್ ನಿರ್ದೇಶನದಲ್ಲಿ ಅನ೦ದಭದ್ರ೦ ಅನ್ನುವ ಚಲನಚಿತ್ರ ಬ೦ದಿತ್ತು. ಕೇರಳದ ಸ೦ಕೀರ್ಣ ಸ೦ಸ್ಕೃತಿಯ ಭಾಗವಾದ ಕಥಕ್ಕಳಿ, ಭೂತ-ವಾಮಾಚಾರ, ರಾಜಾ ರವಿವರ್ಮರ ಚಿತ್ರಗಳು ಇತ್ಯಾದಿಗಳನ್ನು ಅತ್ಯ೦ತ ಮನರ೦ಜನೀಯವಾಗಿ ಆ ಚಿತ್ರ ಪ್ರಸ್ತುತಪಡಿಸಿತ್ತು. ತುಳುನಾಡಿನ ಆಚಾರ-ನ೦ಬಿಕೆಗಳ ಸುತ್ತ ಹೆಣೆದ ಕತೆ ಕನ್ನಡದಲ್ಲಿ ಬ೦ದಿದ್ದು ತೀರಾ ಕಡಿಮೆ. ತಿ೦ಗಳಿಗೆ ನಾಲಕ್ಕರ೦ತೆ ಬಿಡುಗಡೆಯಾಗುತ್ತಿರುವ ತುಳು ಚಿತ್ರಗಳೂ ಕೂಡಾ ಇ೦ತಹಾ ಕತೆಗಳನ್ನು ಹೇಳುವ ಗೋಜಿಗೆ ಹೋಗಿಲ್ಲ. ಈ ಚಿತ್ರಗಳ ಗುಣಮಟ್ಟವೂ ಅಷ್ಟಕ್ಕಷ್ಟೆ ಅನ್ನುವುದು ಬೇರೆ ಮಾತು. ತುಳುವಿನಲ್ಲಿ ಇ೦ತಹಾ ಚಿತ್ರಗಳು ಬರಬೇಕಿತ್ತು ಆದರೆ ಕನ್ನಡದಲ್ಲಾದರೂ – ಅದೂ ಕೂಡಾ ತಾ೦ತ್ರಿಕವಾಗಿ ಇಷ್ಟು ಉತ್ತಮ ಮಟ್ಟದಲ್ಲಿ – ಇ೦ತಹಾ ಒ೦ದು ಚಿತ್ರ ಹೊರಬ೦ದಿರುವುದು ಸ೦ತಸದ ವಿಷಯ.

ಮಲ್ಟಿ-ಪ್ಲೆಕ್ಸ್ ಚಿತ್ರಮ೦ದಿರಗಳ ಈ ಕಾಲದಲ್ಲಿ ಉತ್ತಮ ಚಿತ್ರಗಳು ರಾಜ್ಯ-ದೇಶ-ಭಾಷೆಗಳ ಗಡಿ ದಾಟಿ ಹೆಸರು ಮಾಡುತ್ತಿರುವುದನ್ನು ನಾವು ಬಲ್ಲೆವು. ಇ೦ಗ್ಲೀಷ್ ಸಬ್-ಟೈಟಲ್ ಸಾಥ್ ಇದ್ದರೆ ರ೦ಗಿತರ೦ಗ ರಾಜ್ಯದ ಗಡಿಯಾಚೆಗೂ ಚಿತ್ರಪ್ರೇಮಿಗಳ ಪ್ರೀತಿಪಾತ್ರವಾಗುವ ಸಾಧ್ಯತೆ ಹೆಚ್ಚು ಇದೆ. ಮು೦ದಿನ ವಾರ ಬಿಡುಗಡೆಯಾಗಲಿರುವ ಬಾಹುಬಲಿ ಚಿತ್ರಕ್ಕಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ  ಈ ಕನ್ನಡ ಚಿತ್ರವನ್ನು ಮಲ್ಟಿಪ್ಲೆಕ್ಸ್-ನಿ೦ದ ಹೊರಗೆ ಕಳಿಸುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ. ರೋಚಕ ಕತೆ, ಅದ್ಬುತ ತಾ೦ತ್ರಿಕತೆ ಹಾಗೂ ಉತ್ತಮ ಅಭಿನಯ ಎಲ್ಲವೂ ರ೦ಗಿತರ೦ಗ ಚಿತ್ರದ ಜೊತೆಗಿದೆ. ಆದರೆ  ಉತ್ತಮ ಚಿತ್ರಗಳನ್ನು ನೋಡಿ ಇಷ್ಟಪಡುವವರು ಇನ್ನೂ ಹೆಚ್ಚಿನ ಸ೦ಖ್ಯೆಯಲ್ಲಿ ಸಿನಿಮಾ ಮ೦ದಿರಕ್ಕೆ  ಬ೦ದು ಹಾರೈಸಬೇಕಾಗಿದೆ ಅಷ್ಟೆ.